ನ್ಯೂಸ್ ನಾಟೌಟ್ : ಮಳೆಗಾಲ ಅರಂಭವಾಯಿತೆಂದರೆ ಸಾಕು ಬಟ್ಟೆ ಒಣಗಿಸೋದೇ ದೊಡ್ಡ ಸವಾಲು.ವಾರಗಟ್ಟಲೆ ಮಳೆ ಬಂತೆಂದರೆ ಸೂರ್ಯನ ದರ್ಶನವಾಗುವುದೇ ಅಪರೂಪ.ಇಂತಹ ಸಂದರ್ಭದಲ್ಲಿ ಮನೆಯಲ್ಲಿನ ಮಹಿಳೆಯರಿಗೆ ಈ ಸಮಸ್ಯೆಗಳಿಂದ ಹೇಗೆ ಹೊರಬರೋದು?ಅಷ್ಟೂ ಬಟ್ಟೆಗಳನ್ನು ಎಲ್ಲಿ ಒಣ ಹಾಕೋದು ಎನ್ನುವುದೇ ಸಮಸ್ಯೆ.ಇದರಿಂದ ಹೊರಬರಲು ಕೊಡಗಿನ ಸಾಮಾನ್ಯ ಜನತೆ ಬಳಂಜಿ, ಅಗ್ಗಿಷ್ಟಿಕೆ ಏಡಿಗಳಿಗೆ ಮೊರೆ ಹೋಗುತ್ತಿದ್ದಾರೆ.
ಹೌದು, ಕೊಡಗಿನಲ್ಲಿ ಮೊದಲೇ ಚಳಿ ವಾತಾವರಣ ಕಂಡು ಬರುತ್ತೆ.. ಮಳೆಗಾಲ ಆರಂಭವಾಯಿತ್ತೆಂದರೆ ನಾಲ್ಕೈದು ತಿಂಗಳ ಕಾಲ ಸೂರ್ಯ ಕಣ್ಮರೆಯಾಗುತ್ತಾನೆ. ಹೀಗಾಗಿ ಮಳೆಗಾಲ ಅಲ್ಲಿಯ ಜನರ ಪಾಲಿಗೆ ತಂಪು ತಂಪು, ಕೂಲ್ ಕೂಲ್…ಇದರಿಂದಾಗಿ ನಡುಗುವಷ್ಟು ಇರೋ ಚಳಿಗೆ ಫ್ಯಾನ್ ಹಾಕುವಂತೆಯೂ ಇಲ್ಲ.. ಅದಕ್ಕಾಗಿಯೇ ಅಲ್ಲಿನ ಜನ ಅನಿವಾರ್ಯವಾಗಿ ಬಳಂಜಿ ಮತ್ತು ಅಗ್ಗಿಷ್ಟಿಕೆ ಮೊರೆ ಹೋಗಿದ್ದಾರೆ.
ಮಳೆಯಲ್ಲಿ ತೊಳೆದ ಬಟ್ಟೆ ಒಣಗಲು ಕನಿಷ್ಟ ಅಂದರೂ ಒಂದು ವಾರ ಬೇಕಾಗುತ್ತವೆ.ಅಷ್ಟರಲ್ಲಾಗಲೇ ಬಟ್ಟೆ ಬೂಸ್ಟ್ ಬರೋದಕ್ಕೆ ಶುರುವಾಗುತ್ತವೆ.ಇದರಿಂದ ಜನರು ಬಳಂಜಿಗಳ ಮೊರೆ ಹೋಗಿದ್ದು ಮಡಿಕೇರಿಯಲ್ಲಿ ಭರ್ಜರಿ ಮಾರಾಟ ಆಗುತ್ತಿವೆ. ಕೇವಲ ಬಳಂಜಿ ಇದ್ದರೆ ಸಾಲದು ಅದಕ್ಕೆ ಅಗ್ಗಿಷ್ಟಿಕೆ ಜೊತೆಗೆ ಇದ್ದಿಲು ಬೇಕು. ಅಗ್ಗಿಷ್ಟಿಕೆಗೆ ಇದ್ದಿಲು ತುಂಬಿ ಅದಕ್ಕೆ ಬೆಂಕಿ ಹಾಕಿ ಬಳಂಜಿಯನ್ನು ಅಗ್ಗಿಷ್ಟಿಕೆಗೆ ಮುಚ್ಚಿ ಅದರ ಮೇಲೆ ಬಟ್ಟೆ ಒಣಹಾಕಲಾಗುತ್ತದೆ. ಹೀಗೆ ಮಾಡುವ ಮೂಲಕವೇ ಬಟ್ಟೆಗಳನ್ನು ಒಣಗಿಸಲಾಗುತ್ತಿದೆ. ಇದರಿಂದ ಮಡಿಕೇರಿಯಲ್ಲಿ ಈಗ ಬಳಂಜಿ ಮತ್ತು ಇದ್ದಿಲಿಗೆ ಬಾರಿ ಬೇಡಿಕೆ ಇದ್ದು ಭರ್ಜರಿ ಮಾರಾಟವಾಗುತ್ತಿದೆ.ಇದಕ್ಕಾಗಿ ಬಿದಿರ ಕಟ್ಟಿಗೆಗಳನ್ನು ಸೀಳಿ ಎತ್ತರವಾದ ಗೋಪುರದಂತೆ ಮಾಡಿ ಅವುಗಳನ್ನು ತಲಾ 250 ರಿಂದ 300 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ತಲತಲಾಂತರ ವರ್ಷಗಳಿಂದಲೂ ಕೊಡಗಿನಲ್ಲಿ ಹೆಚ್ಚಿನ ಜನರು ಮಳೆಗಾಲದಲ್ಲಿ ಇವುಗಳನ್ನೇ ಬಳಸುತ್ತಿರುವುದು ವಿಶೇಷ.
ಈ ಕುರಿತು ಮಡಿಕೇರಿ ನಿವಾಸಿಯೊಬ್ಬರು ಮಾತನಾಡಿ ಶ್ರೀಮಂತರು ವಾಷಿಂಗ್ ಮೆಷಿನ್ ಬಳಕೆ ಮಾಡುತ್ತಾರೆ.ಆದರೆ ಸಾಮಾನ್ಯ ಜನರಿಗೆ ಈಗಲೂ ಬಳಂಜಿಗಳನ್ನೇ ಬಳಸಿ ಬಟ್ಟೆ ಒಣಗಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದೊಂದು ಉತ್ತಮ ಉಪಾಯ ಕೂಡ ಹೌದು ಎನ್ನುತ್ತಾರೆ.ವಿಪರೀತ ಚಳಿಗೆ ದೇಹ ಬೆಚ್ಚಗಿಡುವುದು ಕೂಡ ಅಷ್ಟೇ ಮುಖ್ಯ. ಅದಕ್ಕಾಗಿ ಮಳೆಗಾಲದಲ್ಲಿ ಸಿಗುವ ಏಡಿಗಳನ್ನು ಕೂಡ ಹೆಚ್ಚಿನ ಜನರು ಖರೀದಿಸಿ ಅವುಗಳಿಂದ ಖಾದ್ಯ ಮಾಡಿ ಸೇವಿಸುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಿ ಶೀತ ವಾತಾವರಣದಲ್ಲಿ ದೇಹ ಬೆಚ್ಚಗಿರಲು ಸಹಾಯ ಮಾಡುತ್ತದೆ ಎನ್ನುವುದು ಹಲವು ಜನರ ಅಭಿಪ್ರಾಯ.
ಒಟ್ಟಿನಲ್ಲಿ ಮಳೆಗಾಲದಲ್ಲಿ ಜನರ ಜೀವನವೇ ವಿಚಿತ್ರವಾಗಿರುತ್ತದೆ.ಮೀನುಗಳನ್ನು ಹಿಡಿಯುವುದರಿಂದ ಹಿಡಿದು ವಿವಿಧ ಖಾದ್ಯಗಳನ್ನು ತಿನ್ನುವಲ್ಲಿಯವರೆಗೆ ಸಂಭ್ರಮ ಪಡುತ್ತಿರುತ್ತಾರೆ ಹಳ್ಳಿ ಜನರು.ಇವುಗಳ ಮಧ್ಯೆ ಬಟ್ಟೆ ಒಣಗಿಸುವುದಕ್ಕೆ ಈ ಪ್ಲಾನ್ ತುಂಬಾ ಕುತೂಹಲ ಕಾರಿಯಾಗಿದೆ.