ನ್ಯೂಸ್ ನಾಟೌಟ್ : 15 ವರ್ಷದ ಬಾಲಕನೊಬ್ಬ ಮೊಬೈಲ್ ಗೇಮ್ ಆಡಿ ಆಡಿ ಇಂದು ನಿದ್ದೆಯಲ್ಲೂ ಆತನ ಕೈ, ಬಾಯಿ ಗೇಮ್ ನ ವಿಧಾನವನ್ನೇ ಅನುಸುತ್ತಿರುವ ಆಘಾತಕಾರಿ ಘಟನೆ ರಾಜಸ್ಥಾನದ ಆಳ್ವಾರ್ ನಲ್ಲಿ ಬೆಳಕಿಗೆ ಬಂದಿದೆ.
ಕಳೆದ 6 ತಿಂಗಳಿನಿಂದ ಬಾಲಕ ದಿನಕ್ಕೆ 12 ಗಂಟೆಗಿಂತಲೂ ಹೆಚ್ಚು ಫ್ರೀ ಫೈಯರ್ ಹಾಗೂ ಬ್ಯಾಟಲ್ ರಾಯಲ್ ಗೇಮ್ ನ್ನು ಆಡುತ್ತಿದ್ದ ಎನ್ನಲಾಗಿದ್ದು, ಆತ ಅನ್ನ, ಆಹಾರವನ್ನೇ ಮರೆತು ಬಿಟ್ಟಿದ್ದ.
7ನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕ ಪ್ರತಿನಿತ್ಯ ನಿರಂತರವಾಗಿ ಫ್ರೀ ಫೈಯರ್ ಗೇಮ್ ಆಡುತ್ತಿದ್ದ ಪರಿಣಾಮ ಆತನ ಮಾನಸಿಕ ಆರೋಗ್ಯ ಹದಗೆಡಲು ಶುರುವಾಗಿದೆ. ನಿದ್ದೆ ಮಾಡಿರುವ ವೇಳೆ ಆತ “ಫೈಯರ್.. ಫೈಯರ್..” ಎಂದು ಕಿರುಚಾಡಿ ಆತನ ಕೈಗಳು ಗೇಮ್ ನಲ್ಲಿ ಶೂಟ್ ಮಾಡುವ ವಿಧಾನವನ್ನೇ ಅನುಸರಿಸುತ್ತಿದ್ದಾನೆ. ಎರಡು ತಿಂಗಳು ಪೋಷಕರು ಬಾಲಕನನ್ನು ಮೊಬೈಲ್ ನಿಂದ ದೂರವಿಡಲು ಯತ್ನಿಸಿದರೂ, ಬಾಲಕನ ಚಲನವಲನ ಗೇಮ್ ವಿಧಾನವನ್ನೇ ಅನುಸರಿಸಿದೆ. ಇದರಿಂದ ಮತ್ತಷ್ಟು ಗಾಬರಿಗೊಂಡ ಪೋಷಕರು ಆತನನ್ನು ಆಸ್ಪತ್ರೆಯಲ್ಲಿ ತೋರಿಸಿದ್ದಾರೆ.
ಬಾಲಕನನ್ನು ಸದ್ಯ ವಿಶೇಷ ಚೇತನರ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಮನೋವೈದ್ಯರು ಮತ್ತು ವೈದ್ಯರ ತಂಡವು ಪ್ರಸ್ತುತ ಬಾಲಕನ ಆರೋಗ್ಯದ ಮೇಲೆ ನಿಗಾ ಇರಿಸಿದೆ. ಬಾಲಕನ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಾಣುತ್ತಿದ್ದು, ಆದರೆ ಆತನ ಚಲನವಲನದ ಸ್ಥಿತಿ ಮೊದಲಿನಂತೆಯೇ ಇದೆ ಎಂದು ವರದಿ ತಿಳಿಸಿದೆ. ಬಾಲಕನ ತಾಯಿ ಮನೆ ಕೆಲಸದವರಾಗಿದ್ದು, ತಂದೆ ರಿಕ್ಷಾ ಚಾಲಕರಾಗಿದ್ದಾರೆ.