ನ್ಯೂಸ್ ನಾಟೌಟ್ : ಆ ದಿನಗಳಲ್ಲಿ ಇಡೀ ಹಳ್ಳಿಗಳು ಜಾನಪದ ಸೊಗಡಿನಿಂದ ಬೀಗುತ್ತಿತ್ತು .ಇಂದಿನ ಆಧುನಿಕತೆಗೆ, ಆಡಂಬರ ಜೀವನಕ್ಕೆ ಮಾರು ಹೋಗುತ್ತಿರುವ ಯುವ ಪೀಳಿಗೆಗೆ ಹಳ್ಳಿಯ ಬದುಕು ಬೇಡವಾಗಿದೆ.ಆದರೆ ಇಲ್ಲೊಂದೆಡೆ ಹಳ್ಳಿಯ ಸೊಗಡನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿನಾಟಿ ಕೋಳಿ ಸಾರು, ರಾಗಿ ಮುದ್ದೆ ಊಟದ ಸ್ಪರ್ಧೆ ಮಂಥನ ಹೋಟೆಲ್ ಅವರಣದಲ್ಲಿ ಆಯೋಜನೆ ಮಾಡಲಾಗಿತ್ತು.
ಈ ವಿಶೇಷ ಸ್ಪರ್ಧೆಯಲ್ಲಿ ಹಿರಿಯ ಅಜ್ಜ ( 70 ವರ್ಷ) ಶ್ರೀನಿವಾಸ್ ಬರೋಬ್ಬರಿ 250 ಗ್ರಾಂ ತೂಕದ 12 ಮುದ್ದೆಗಳನ್ನು ತಿನ್ನುವ ಮೂಲಕ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.ಅಂದರೆ 3 ಕಿಲೋ ಮುದ್ದೆ ತಿಂದು ಎಲ್ಲರ ಗಮನ ಸೆಳೆದಿದ್ದಾರೆ. ಗೆದ್ದ ತಾತನಿಗೆ ದಷ್ಟಪುಷ್ಟವಾದ ಕುರಿಯನ್ನು ಬಹುಮಾನವಾಗಿ ನೀಡಲಾಯಿತು.
ಮಿತಿ ಮೀರಿದ ಯಾಂತ್ರೀಕರಣದಿಂದಾಗಿ ಪ್ರಸ್ತುತ ದಿನಗಳಲ್ಲಿ ಹಳ್ಳಿ ಸೊಬಗು ಕಾಣುವದು ಅಪರೂಪವಾಗಿದೆ. ಅದರಲ್ಲೂ ಹೆಚ್ಚಿನವರು ದೇಶಿ ಶೈಲಿಯ ಆಹಾರ ಪದ್ದತಿಗಳ ಕಡೆಗೆ ಒಲವು ತೋರದೆ ಫಾಸ್ಟ್ ಫುಡ್ ನತ್ತ ವಾಲುತ್ತಿದ್ದಾರೆ. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನೈಸರ್ಗಿಕ ಆಹಾರವನ್ನು ಕಡೆಗಣಿಸುತ್ತಿದ್ದೇವೆ. ರೋಗ ನಿರೋಧಕ ಶಕ್ತಿ ಇರುವ ದೇಶಿ ಆಹಾರ ಪದ್ಧತಿಯನ್ನು ಮೂಲೆಗುಂಪು ಮಾಡಿದ್ದೇವೆ.ನಮ್ಮ ಹಳೆ ಶೈಲಿಯ ಆಹಾರ ಪದ್ದತಿಗಳು ಜೀವಂತವಾಗಿರಬೇಕು ಎನ್ನುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಮಹೇಶ್ ಮತ್ತು ಕೆಎನ್ ಪ್ರಿಂಟರ್ಸ್ ಸಹಭಾಗಿತ್ವದಲ್ಲಿ ಆಯೋಜನೆ ಮಾಡಲಾಗಿತ್ತು.ಈ ಸ್ಪರ್ಧೆಯಲ್ಲಿ ಮಂಡ್ಯ, ಕುಣಿಗಲ್, ಹಾಸನ, ಹೊಸಕೋಟೆ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ ಸೇಲಂ ಸೇರಿದಂತೆ ವಿವಿಧೆಡೆಗಳಿಂದ 37 ಸ್ಪರ್ಧಿಗಳು ಭಾಗಿಯಾಗಿದ್ದರು.30 ನಿಮಿಷ ಕಾಲಾವಕಾಶದಲ್ಲಿ ನಾಟಿ ಕೋಳಿ ಮತ್ತು ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿಭಾಗವಹಿಸಿದ್ದ ಸ್ಪರ್ಧಾಳುಗಳ ನಡುವೆ ಮೊದಲ ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆಯಿತು. ಅಂತಿಮವಾಗಿ ಸ್ಪರ್ಧೆಯಲ್ಲಿ ಬೆಂಗಳೂರು ಮೂಲದ ಮಹಾಲಕ್ಷ್ಮಿ ಲೇಔಟ್ನ ಹರೀಶ್ ಎಂಬವರು 13 ರಾಗಿ ಮುದ್ದೆ ತಿಂದು ಮೊದಲ ಸ್ಥಾನ ಪಡೆದರು. 2ನೇ ಸ್ಥಾನವನ್ನು ಶ್ರೀನಿವಾಸ್ ಎಂಬವರು ಪಡೆದರೆ, ಆನಂದ್ ಮೂರನೇ ಸ್ಥಾನ ಪಡೆದು ತೃಪ್ತಿ ಪಟ್ಟು ಕೊಂಡರು.