ನ್ಯೂಸ್ ನಾಟೌಟ್: ಹನುಮಂತನ ದೇವಸ್ಥಾನವೊಂದರಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಕಳ್ಳ ಆಂಜನೇಯನ ಮೂರ್ತಿಯೆದುರು ಕುಳಿತು ಕೆಲ ನಿಮಿಷಗಳ ಕಾಲ ಹನುಮಾನ್ ಚಾಲೀಸಾ ಪಠಿಸಿದ್ದಾನೆ ಬಳಿಕ ರೂ.10 ಅನ್ನು ಹನುಮಂತನಿಗೆ ಅರ್ಪಿಸಿ, ಕಾಣಿಕೆ ಡಬ್ಬಿಯಲ್ಲಿದ್ದ 5,000 ರೂಪಾಯಿಯನ್ನು ಅನ್ನು ಕಳ್ಳತನ ಮಾಡಿ ಪರಾರಿಯಾದ ಘಟನೆ ಹರಿಯಾಣದ ರೇವಾರಿ (Rewari) ಜಿಲ್ಲೆಯ ಧರುಹೇರಾದಲ್ಲಿ ನಡೆದಿದೆ .
ಈ ಘಟನೆ ದೇವಸ್ಥಾನದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇವನ ಕುತೂಹಲಕಾರಿ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಮೊದಲಿಗೆ ಅವನು ಹನುಮಂತನೆದುರು ಕೆಲ ನಿಮಿಷಗಳ ಕಾಲ ಕುಳಿತುಕೊಳ್ಳುತ್ತಾನೆ. ಚಾಲೀಸಾ ಪಠಿಸಿ ಧ್ಯಾನಿಸುತ್ತಾನೆ. ನಂತರ ಹನುಮಂತನ ಪಾದಗಳ ಮೇಲೆ ರೂ. 10 ಇಡುತ್ತಾನೆ. ಜಾಗರೂಕತೆಯಿಂದ ಕಾಣಿಕೆ ಪೆಟ್ಟಿಗೆಯನ್ನು ತೆರೆದು ಅಲ್ಲಿದ್ದ ನೋಟುಗಳನ್ನು ತೆಗೆದುಕೊಂಡು ಪರಾರಿಯಾಗುತ್ತಾನೆ. ಇದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಾತ್ರಿ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿಕೊಂಡು ಮನೆಗೆ ಹೋದ ಅರ್ಚಕರಿಗೆ ಮಾರನೆಯ ದಿನ ದೇವಸ್ಥಾನಕ್ಕೆ ಬಂದಾಗ ಕಾಣಿಕೆ ಡಬ್ಬಿಯ ಬೀಗ ಮುರಿದಿರುವುದು ಅರಿವಿಗೆ ಬಂದಿದೆ. ಪೊಲೀಸರು ಆರೋಪಿಯ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ಅವನನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.
ಕಳ್ಳನ ಈ ಕುತೂಹಲಕಾರಿ ನಡೆ ಅನೇಕರಿಗೆ ಅಚ್ಚರಿಯನ್ನುಂಟು ಮಾಡಿದೆ. ಈ ಬಗ್ಗೆ ಅಂತರ್ಜಾಲದಲ್ಲಿ ಚರ್ಚೆಯಾಗುತ್ತಿದೆ. ಈ ಘಟನೆಯನ್ನು ಹೇಗೆ ಗ್ರಹಿಸಬೇಕು ಎಂದು ಕೆಲವರು ಗೊಂದಲಕ್ಕೆ ಬಿದ್ದಿದ್ದಾರೆ. ಇನ್ನೂ ಕೆಲವರು ಏನೇ ಮಾಡಿದರೂ ಇದು ಕಳ್ಳತನವೇ, ಅಪರಾಧಿಗೆ ಶಿಕ್ಷೆಯಾಗಬೇಕು ಎಂದು ಹೇಳುತ್ತಿದ್ದಾರೆ ಎಂದು ವರದಿ ತಿಳಿಸಿದೆ.