ನ್ಯೂಸ್ ನಾಟೌಟ್: ಭೀಕರ ಅಪಘಾತಕ್ಕೆ ತುತ್ತಾಗಿ ಕಳೆದ ಒಂದು ತಿಂಗಳಿನಿಂದ ಜೀವನ್ಮರಣದ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದ ಉಜಿರೆಯ ಹಿರಿಯ ಪತ್ರಿಕೋದ್ಯಮ ವಿದ್ಯಾರ್ಥಿ, ಯುವ ಪತ್ರಕರ್ತ ಪೌಲ್ಸ್ ಬೆಂಜಮಿನ್ (28 ವರ್ಷ) ನಿಧನರಾಗಿದ್ದಾರೆ.
ಬೆಂಗಳೂರಿನ ಸೇಂಟ್ಸ್ ಪೌಲ್ಸ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ ಪೌಲ್ಸ್ ಬೆಂಜಮಿನ್ ಇತ್ತೀಚೆಗೆ ಟ್ರಕ್ ಹಾಗೂ ಕಾರು ನಡುವಿನ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರು. ಇವರಿಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸ್ವಲ್ಪ ಚೇತರಿಕೆಯನ್ನೂ ಕಂಡಿದ್ದರು. ಈ ವೇಳೆ ಶಸ್ತ್ರಚಿಕಿತ್ಸೆಯ ಅನಿವಾರ್ಯತೆಯನ್ನು ವೈದ್ಯರು ತಿಳಿಸಿದ್ದರು. ಅದರಂತೆ ಶಸ್ತ್ರಚಿಕಿತ್ಸೆಗೆ ವೈದ್ಯರು ಸಿದ್ಧತೆ ನಡೆಸಿಕೊಂಡರು. ಅಪರೇಶನ್ಗೂ ಮೊದಲು ಅನಸ್ತೇಶಿಯಾ ನೀಡುತ್ತಿದ್ದಂತೆ ಪೌಲ್ಸ್ ಬೆಂಜಮಿನ್ ಕೋಮಾ ಸ್ಟೇಜ್ಗೆ ಜಾರಿದರು. ನಿಧಾನವಾಗಿ ಅವರ ಒಂದೊಂದೇ ಅಂಗಗಳು ವೈಫಲ್ಯವಾಗುತ್ತಾ ಬಂದವು. ಮಂಗಳವಾರ (ಜು.11) ರಂದು ರಾತ್ರಿ 10 ಗಂಟೆಗೆ ನಿಧನರಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಪೌಲ್ಸ್ ಬೆಂಜಮಿನ್ 2018 ರಲ್ಲಿ ಉಜಿರೆಯ ಎಸ್ಡಿಎಂ ಕಾಲೇಜಿನ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ (ಎಂಸಿಜೆ) ಪಡೆದುಕೊಂಡಿದ್ದರು. ಬಳಿಕ ಅವರು ಮಂಗಳೂರು ವಿಭಾಗದ ಉದಯವಾಣಿ ಪತ್ರಿಕೆಯ ಆನ್ಲೈನ್ ಡಿಜಿಟಲ್ ನ್ಯೂಸ್ ತಂಡದ ಜೊತೆಗೆ ಕೆಲಸ ಮಾಡಿದ್ದರು. ಬಳಿಕ ಬೆಂಗಳೂರಿನ ಸೇಂಟ್ಸ್ ಪೌಲ್ಸ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಮೂಲತಃ ಪೌಲ್ಸ್ ಬೆಂಜಮಿನ್ ಅವರು ಮೈಸೂರಿನ ಕೊಳ್ಳೆಗಾಲದವರು. ಅತ್ಯಂತ ಚುರುಕು ಸ್ವಭಾವ, ಪ್ರತಿಭಾವಂತನಾಗಿದ್ದ ಬೆಂಜಮಿನ್ ಕಳೆದುಕೊಂಡು ಕುಟುಂಬ ವರ್ಗ, ಸ್ನೇಹಿತ ಬಳಕ ಕಣ್ಣೀರಾಗಿದೆ.