ನ್ಯೂಸ್ ನಾಟೌಟ್: ಪಾಠ ಮಾಡುವ ಅಧ್ಯಾಪಕರು ಮಕ್ಕಳಿಗೆ ದೇವರಿಗೆ ಸಮಾನ ಎಂದು ಹೇಳುತ್ತೇವೆ. ಅಂತಹ ಗುರುಗಳೇ ಮಕ್ಕಳಿಗೆ ಮೋಸ ಮಾಡಿದ್ರೆ ಹೇಗಿರುತ್ತೆ ಹೇಳಿ..? ಹೌದು , ಇಲ್ಲೊಬ್ಬ ಶಿಕ್ಷಕ ನಂಬಿದ ವಿದ್ಯಾರ್ಥಿಗಳ ಮೋಸ ಮಾಡಿದ್ದಾನೆ. ತಿಂಗಳಾಗುವಾಗ ಸರ್ಕಾರಿ ಸಂಬಳ ತೆಗೆದುಕೊಂಡು ಶಾಲೆಗೆ ಬಾರದೆ ಮಕ್ಕಳಿಗೆ ಪಾಠ ಮಾಡದೆ ಊರೂರು ಸುತ್ತಾಡಿದ್ದಾನೆ. ಈ ವಿಷಯ ಯಾರಿಗೂ ಗೊತ್ತಾಗಬಾರದು ಎಂದು ತನ್ನ ಬದಲಿಗೆ ಪಾಠ ಮಾಡಲು ಶಿಕ್ಷಕಿಯನ್ನು ನೇಮಿಸಿದ್ದಾನೆ. ಸದ್ಯ ಈತನಿಗೆ ನೋಟಿಸ್ ನೀಡಲಾಗಿದೆ.
ಇಂಥದ್ದೊಂದು ಆರೋಪ ಕೇಳಿ ಬಂದಿರುವುದು ಮಹೇಂದ್ರ ಕುಮಾರ್ ಎಂಬ ಶಾಲಾ ಶಿಕ್ಷಕನ ಮೇಲೆ. ಈತ ಚಿತ್ತಾಪುರ ತಾಲೂಕಿನ ಬಾಳಿ ನಾಯಕ್ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡೋ ಶಿಕ್ಷಕ. ಸರ್ಕಾರಿ ಸಂಬಳ ಈತನಿಗೆ, ಪಾಠ ಮಾಡುವುದು ಮಾತ್ರ ಯಾರೋ ಮಹಿಳೆ. ಹೌದು, ಮಹೇಂದ್ರ ಕುಮಾರ್ ಮಕ್ಕಳಿಗೆ ಪಾಠ ಮಾಡಲು ತನ್ನ ಬದಲಿಗೆ 6 ಸಾವಿರ ಸಂಬಳ ನೀಡಿ ಯಾರೋ ಮಹಿಳೆಯನ್ನು ನೇಮಿಸಿದ್ದಾನೆ.
ಕಳೆದ 6 ತಿಂಗಳಿನಿಂದ ಗುತ್ತಿಗೆ ಆಧಾರದ ಮೇರೆಗೆ ನೇಮಕವಾದ ಮಹಿಳೆ ಮಕ್ಕಳಿಗೆ ಪಾಠ ಮಾಡುತ್ತಿದ್ದಾಳೆ. ಮಹೇಂದ್ರ ಕುಮಾರ್ ಮಾತ್ರ 2 ದಿನಕ್ಕೊಮ್ಮೆ ಬಂದು ಸಹಿ ಮಾಡಿ ಹೋಗುತ್ತಿದ್ದ ಎಂದು ತಿಳಿದು ಬಂದಿದೆ.
ಇನ್ನು, ವಿಷಯ ತಿಳಿದ ಕೂಡಲೇ ಶಿಕ್ಷಕ ಮಹೇಂದ್ರ ಕುಮಾರ್ಗೆ ಶಿಕ್ಷಣ ಇಲಾಖೆಯ ಡಿಡಿಪಿಐ ನೋಟಿಸ್ ನೀಡಿದ್ದಾರೆ. ಜತೆಗೆ ಆದಷ್ಟು ಬೇಗ ಇದಕ್ಕೆ ಕಾರಣ ನೀಡಿ ಎಂದು ನೋಟಿಸ್ನಲ್ಲಿ ಕೇಳಲಾಗಿದೆ.