ಸುಳ್ಯ: ಬಿ.ಎಸ್. ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದಾಗ ಅಡಿಕೆ ಹಳದಿ ಎಲೆ ರೋಗ ಸಂಶೋಧನೆಗೆಂದು ಬಜೆಟ್ ನಲ್ಲಿ ಘೋಷಿಸಿರುವ ರೂ.25 ಕೋಟಿ ಮೊತ್ತವನ್ನು ರೈತರ ಆರ್ಥಿಕ ಪುನಶ್ಚೇತನಕ್ಕೆ ನೀಡಬೇಕೆಂದು ಸುಳ್ಯದ ಅಡಿಕೆ ಬೆಳೆ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೇದಿಕೆಯ ಸಂಚಾಲಕ ಶಿವಾನಂದ ಕುಕ್ಕುಂಬಳ, ಅಡಿಕೆ ಕೃಷಿಗೆ ಹಳದಿ ಎಲೆ ರೋಗ ಬಂದುದರಿಂದ ಈ ಭಾಗದ ರೈತರು ಸಂಕಷ್ಟಕ್ಕೊಳಗಾಗಿ ರೈತರ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಈ ಬಗ್ಗೆ ಜನಜಾಗೃತಿಗಾಗಿ ಕಾರ್ಯಕ್ರಮಗಳು ನಡೆದಿದೆ. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬಜೆಟ್ ನಲ್ಲಿ ಅಡಿಕೆ ಹಳದಿ ಎಲೆ ರೋಗಕ್ಕೆ 25 ಕೋಟಿ ರೂ ಮೀಸಲಿಟ್ಟಿದ್ದರು. ಘೋಷಣೆಯಗಿರುವ ಮೊತ್ತ ಸಂತ್ರಸ್ತ ರೈತರ ಆರ್ಥಿಕ ಪುನಶ್ಚೇತನಕ್ಕೆ ದೊರೆಯಬಹುದೆಂಬ ನಿರೀಕ್ಷೆಯಿಂದ ನಾವೆಲ್ಲ ಇದ್ದೆವು. ಬಳಿಕ ಅದು ಸಂಶೋಧನೆಗೆ ಮೀಸಲಿಟ್ಟದ್ದೆಂದು ವರದಿಯಾದಾಗ ಅದು ರೈತರ ಭಾವನೆಗೆ ಪೂರಕವಾಗಿಲ್ಲ ಎಂದು ಗೊತ್ತಾಗಿ ಬೇಸರವಾಗಿತ್ತು. ಆರಂಭದಿಂದಲೇ ನಮ್ಮ ಪ್ರಮುಖ ಬೇಡಿಕೆ ಇದ್ದುದು ಅಡಿಕೆ ಹಳದಿ ಎಲೆ ರೋಗದಿಂದ ಸಂತ್ರಸ್ತರಾಗಿರುವ ರೈತರಿಗೆ ಆರ್ಥಿಕ ಪುನಶ್ಚೇತನ ಮಾಡಬೇಕೆನ್ನುವುದು. ಆದ್ದರಿಂದ ಈಗ ಸಂಶೋಧನೆಗೆಂದು ಇಟ್ಟಿರುವ ಹಣವನ್ನು ಆರ್ಥಿಕ ಪುನಶ್ಚೇತನಕ್ಕೆ ನೀಡಬೇಕು ಎಂದು ನಾವು ಸರಕಾರ ಮತ್ತು ಅಧಿಕಾರಿಗಳನ್ನು ಒತ್ತಾಯಿಸುವುದಾಗಿ ತಿಳಿಸಿದರು. ವೇದಿಕೆಯಲ್ಲಿ ಅನೂಪ್ ಬಿಳಿಮಲೆ, ಸುದರ್ಶನ್ ಪಾತಿಕಲ್ಲು, ಮನುದೇವ್ ಪರಮಲೆ ಉಪಸ್ಥಿತರಿದ್ದರು.