ನ್ಯೂಸ್ ನಾಟೌಟ್: ಕೊಡಗು (Kodagu) ಜಿಲ್ಲೆಯಲ್ಲಿ ಮಹಾಮಳೆಯಿಂದ ಅನಾಹುತಗಳು ಸೃಷ್ಟಿಯಾಗಿದ್ದ 2019ರ ಪ್ರವಾಹದ ಸಮಯದಲ್ಲಿ, ಜುಲೈ-ಆಗಸ್ಟ್ ತಿಂಗಳಲ್ಲಿ ಸುರಿದ ಬಾರಿ ಮಳೆಗೆ ಅ ಊರಿನಲ್ಲಿ ಬೆಟ್ಟವೇ ಕುಸಿದು ಸಾವು-ನೋವುಗಳು ಸಂಭವಿಸಿದವು.
ಈ ಘಟನೆಯಲ್ಲಿ ವ್ಯಕ್ತಿಯೊಬ್ಬರ ಹೆಂಡತಿ-ಮಕ್ಕಳು ಭೂಕುಸಿತದಿಂದ ಮರಣ ಹೊಂದಿದ್ದರು. ಅ ಘಟನೆಯಿಂದ ಹೊರಗೆ ಬಾರದೇ ಇರುವ ಅ ಊರಿನ ಜನರು ಇಂದಿಗೂ ಸಣ್ಣಮಳೆ ಬಂದರೂ ಭಯಪಡುವುದು ಸಹಜವಾಗಿದೆ. ಅದರೆ ಅ ವ್ಯಕ್ತಿಯೊಬ್ಬರು ಮಾತ್ರ ತನ್ನ ಹೆಂಡತಿ-ಮಕ್ಕಳ ಮೇಲಿನ ಆಪಾರವಾದ ಪ್ರೀತಿಗಾಗಿ ಅವರಿಗೆ ಬಂದ ಪರಿಹಾರದ ಹಣದಲ್ಲಿ ಬಡ ಜನರಿಗೆ ಒಂದು ಸೂರು ಕಲ್ಪಿಸುವ ಮೂಲಕ ಜಿಲ್ಲೆಯ ಜನರಿಗೆ ಮಾದರಿಯಾಗಿದ್ದಾರೆ.
2019 ರಲ್ಲಿ ಕೊಡಗಿನ ವಿರಾಜಪೇಟೆ ತಾಲ್ಲೂಕಿನ ತೋರ ಗ್ರಾಮದಲ್ಲಿ ಮಹಾಮಳೆಗೆ ದುರ್ಘಟನೆಯೊಂದು ನಡೆದುಹೋಗಿತ್ತು. ಭಾರೀ ಮಳೆ ಇರುವ ಹಿನ್ನೆಲೆಯಲ್ಲಿ ಮನೆಯ ಮುಂದೆ ಪ್ರವಾಹ ಬರುತ್ತದೆ ಎಂದು ಬೆಟ್ಟದ ಮೇಲೆ ಆಶ್ರಯ ಪಡೆಯಲು ಹೊರಟಿದ್ದ ಜನರಿಗೆ ಪ್ರಕೃತಿಯೇ ಮುನಿಸಿಕೊಂಡು ಆ ಬೆಟ್ಟ ಪ್ರದೇಶವೇ ಭೂಕುಸಿತವಾಗಿತ್ತು. ಸುಮಾರು 10 ಜನರು ಮಣ್ಣಿನ ಅವಶೇಷಗಳಲ್ಲಿ ಸಿಲುಕಿ ಸಾವನ್ನಪ್ಪಿದ್ದರು. ಶವಗಳ ಹುಡುಕಾಟವು ಸುಮಾರು ವಾರಗಟ್ಟಲೇ ನಡೆದಿತ್ತು.
ಅಂದು ಈ ಘಟನೆಯಲ್ಲಿ ಪ್ರಭು ಕುಮಾರ್ ಎಂಬವರು ತನ್ನ ಹೆಂಡತಿ ಅನಸೂಯ ಹಾಗೂ ಮಕ್ಕಳಾದ ಅಮೃತ, ಅದಿತಿಯನ್ನು ಕಳೆದುಕೊಂಡಿದ್ದರು. ಸರ್ಕಾರದಿಂದ ಪರಿಹಾರದ ಹಣವನ್ನು ಮೃತಪಟ್ಟವರ ಕುಟುಂಬಸ್ಥರಿಗೆ ನೀಡಲಾಗಿತ್ತು. ಪರಿಹಾರದ ಹಣವನ್ನು ಪಡೆದ ಪ್ರಭುಕುಮಾರ್, ಹೆಂಡತಿ-ಮಕ್ಕಳ ಹೆಸರಿನಲ್ಲಿ ಏನನ್ನಾದರೂ ಮಾಡಬೇಕು ಎಂದು ಯೋಚಿಸಿ, ತೋಟದ ಕಾರ್ಮಿಕರಾಗಿ ಕಷ್ಟದಲ್ಲಿ ದಡುಯುತ್ತಿರುವ ಬೋಜು, ಬೊಳ್ಳಕ್ಕಿ ಎಂಬ ಕುಟುಂಬಕ್ಕೆ ಒಂದು ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ತನ್ನ ಹೆಂಡತಿ-ಮಕ್ಕಳ ಆಸೆಯಂತೆ ಬಡವರ್ಗದ ಜನರಿಗೆ ಸಹಾಯ ಮಾಡಬೇಕು ಎಂಬ ಹಂಬಲದಿಂದ ತನ್ನ ಆಸೆ ಈಡೇರಿಸುವ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.
ಈ ತೋರಾ ಗ್ರಾಮದಲ್ಲೇ ಚಿಕ್ಕ ತೋಟವನ್ನು ಹೊಂದಿರುವ ಬೋಜು, ಬೊಳ್ಳಚ್ಚಿ ಅವರ ಮಕ್ಕಳಾದ ಶರಣು, ಶಾಂತಿ ಕುಟುಂಬ ಚಿಕ್ಕ ಮತ್ತು ಹಳೆಯದಾದ ಹುಲ್ಲಿನ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿತ್ತು. ಇದನ್ನು ಗಮನಿಸಿದ ಪ್ರಭುಕುಮಾರ್ 80 ಸಾವಿರ ವೆಚ್ಚದಲ್ಲಿ ಸಿಮೆಂಟ್ ಕಾಂಪೌಂಡ್ ಗೋಡೆಗಳನ್ನು ಬಳಸಿ, ಸಿಮೆಂಟ್ ಶೀಟುಗಳನ್ನು ಹೊದಿಸಿ ಬೆಚ್ಚನೆಯ ಸೂರೊಂದನ್ನು ನಿರ್ಮಿಸಿಕೊಟ್ಟಿದ್ದಾರೆ. ಮನೆ ಕಲ್ಪಿಸಿಕೊಟ್ಟ ಪ್ರಭು ಅವರ ಕಾರ್ಯಕ್ಕೆ ಈ ಬಡ ಕುಟುಂಬ ಚಿರರುಣಿ ಯಾಗಿದ್ದೇವೆ ಎಂದು ಹೇಳಿದ್ದಾರೆ.