ನ್ಯೂಸ್ ನಾಟೌಟ್: ನೀರಿನ ಸಮಸ್ಯೆಯನ್ನು ಹೇಳಿಕೊಂಡ ದಲಿತ ಯುವತಿಯ ಮೊಬೈಲ್ ನಂಬರ್ ಅನ್ನು ಪರ ಪುರುಷನಿಗೆ ನೀಡಿ ಕರೆ ಮಾಡಿಸಿ ಆಕೆಗೆ ಮಾನಸಿಕ ಕಿರುಕುಳವನ್ನು ಪಂಚಾಯತ್ ಸದಸ್ಯೆಯೊಬ್ಬರು ನೀಡಿದ್ದಾರೆ ಅನ್ನುವ ವಿಚಾರ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನೀರಿನ ಸಮಸ್ಯೆಯನ್ನು ಪರಿಹರಿಸಿ ಕೊಡುವಂತೆ ಕಂದಾವರ ಪಂಚಾಯತ್ ನ ಸದಸ್ಯೆ ಸವಿತಾ ಎಂಬವರಿಗೆ ಯುವತಿಯೊಬ್ಬರು ಮನವಿ ಮಾಡಿದ್ದಾರೆ. ಆದರೆ ಅವರು ಪುರುಷನೋರ್ವನಿಗೆ ಆ ಯುವತಿಯ ಮೊಬೈಲ್ ನಂಬರ್ ನೀಡಿ ಕರೆ ಮಾಡಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಇದೀಗ ಬಜ್ಪೆ ಪೊಲೀಸ್ ಠಾಣೆ ಎದುರು ಯುವತಿಯ ಸಂಬಂಧಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ಯುವತಿಯ ಸಹೋದರ ಹಾಗೂ ಸ್ಥಳೀಯರು ಸೇರಿ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ದೂರು ದಾಖಲಿಸಿಕೊಂಡು ತಕ್ಷಣದಲ್ಲಿ ಕ್ರಮಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಗ್ರಾಮಸ್ಥರು ಪೊಲೀಸ್ ಠಾಣೆ ಬಳಿ ಜಮಾಯಿಸಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.
ಯುವತಿಯ ಸಹೋದರ ಚರಣ್ ಅನ್ನುವವರು ಈ ಬಗ್ಗೆ ಮಾತನಾಡಿ, ಮುಂಡಾಲ ಸಮುದಾಯದ ಯುವಕನಾಗಿದ್ದು ನಮ್ಮ ಗ್ರಾಮದಲ್ಲಿ ಹಲವು ಸಮಯಗಳಿಂದ ನೀರಿನ ಸಮಸ್ಯೆ ಇದೆ. ಇದರ ಬಗ್ಗೆ ನನ್ನ ತಂಗಿ ಪಂಚಾಯತ್ ಸದಸ್ಯೆ ಸವಿತಾ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಪಿಡಿಓ ಅವರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಆದರೆ ಸವಿತಾ ಅನ್ನುವವರು ನನ್ನ ತಂಗಿಯ ನಂಬರ್ ಅನ್ನು ಸುದರ್ಶನ ಎಂಬ ವ್ಯಕ್ತಿಗೆ ನೀಡಿದ್ದು ಆತ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಾವು ನೀರಿನ ಸಮಸ್ಯೆ ಬಗ್ಗೆ ಪ್ರಶ್ನಿಸಿದ್ರೆ ನಮಗೆ ಭದ್ರತೆಯೇ ಇಲ್ಲದಂತಾಗಿದೆ. ನಮ್ಮನ್ನು ಬೆದರಿಸಿ ಸುಮ್ಮನಾಗಿಸುತ್ತಿದ್ದಾರೆ. ನಾವು ಮನೆಗೆ ಬರ್ತೀವಿ ಎಂದು ಆ ವ್ಯಕ್ತಿ ನನ್ನ ತಂಗಿಗೆ ಬೆದರಿಕೆ ಹಾಕಿದ್ದಾರೆ. ಹಾಗಿದ್ರೆ ನಾವು ಹೆದರಿಕೊಂಡೇ ಬದುಕಬೇಕೇ? ನಮಗೆ ರಕ್ಷಣೆ ಕೊಡೋದು ಯಾರು? ಪಂಚಾಯತ್ ಅಧ್ಯಕ್ಷರಿಗೆ ಇದರ ಬಗ್ಗೆ ಕರೆ ಮಾಡಿದಾಗ, ಹೌದು… ಅವರು ಮಾಡಿರೋದು ತಪ್ಪು ಎಂದು ಅವರು ಕೂಡ ಹೇಳಿದ್ದಾರೆ. ಬೇರೆಯವರಿಗೆ ನಂಬರ್ ಕೊಡಬಾರದಿತ್ತು. ಹೆಣ್ಣಿನ ನಂಬರ್ ಬೇರೆಯವರಿಗೆ ಕೊಟ್ರೆ ಹೇಗೆ ಎಂದು ಚರಣ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಬಜ್ಪೆ ಪೊಲೀಸ್ ಠಾಣೆ ಎದುರು ಮಂಗಳವಾರ ರಾತ್ರಿಯಿಂದ ಬೆಳಗ್ಗೆ ವರೆಗೆ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇದುವರೆಗೆ ಪೊಲೀಸರು ದೂರು ದಾಖಲಿಸಿಕೊಳ್ಳದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.