ನ್ಯೂಸ್ ನಾಟೌಟ್: ವಿಶಾಖ ಜ್ಞಾನಾನಂದ ಆಶ್ರಮದ ಸ್ವಾಮೀಜಿ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದೆ. ಆಂಧ್ರಪ್ರದೇಶದ ವಿಶಾಖದ ನ್ಯೂ ವೆಂಕೋಜಿಪಾಲೆಂನಲ್ಲಿರುವ ಆಶ್ರಮದ ಪೂರ್ಣಾನಂದ ಸ್ವಾಮೀಜಿ ವಿರುದ್ದ ಆಶ್ರಮದ 15 ವರ್ಷದ ಅನಾಥ ಬಾಲಕಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಅಪ್ರಾಪ್ತಳ ದೂರಿನ ಅನ್ವಯ ನಿನ್ನೆ ತಡರಾತ್ರಿ ಪೊಲೀಸರು ಪೂರ್ಣಾನಂದ ಸ್ವಾಮೀಜಿಯನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.
ಈ ಘಟನೆ ಬಗ್ಗೆ ಬಾಲಕಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ’’ರಾಜಮಹೇಂದ್ರವರಂ ತಾನು ಚಿಕ್ಕವಳಿದ್ದಾಗ ತನ್ನ ತಂದೆ ತಾಯಿ ಇಬ್ಬರು ತೀರಿಕೊಂಡರು. ಬಂಧುಗಳು ಐದನೇ ತರಗತಿವರೆಗೆ ವಿದ್ಯಾಭ್ಯಾಸ ಕೊಡಿಸಿದರು. ಬಳಿಕ ಎರಡು ವರ್ಷಗಳ ಹಿಂದೆ ತಾನು ವಿಶಾಖದ ನ್ಯೂ ವೆಂಕೋಜಿಪಾಲೆಂನಲ್ಲಿರುವ ಜ್ಞಾನಾನಂದ ಆಶ್ರಮಕ್ಕೆ ಸೇರಿದೆ. ಆಶ್ರಮ ನಡೆಸುತ್ತಿರುವ ಪೂರ್ಣಾನಂದ ಸ್ವಾಮಿ ಹಸುಗಳಿಗೆ ಮೇವು ಹಾಕಿ ಸಗಣಿ ಸಂಗ್ರಹಿಸಲು ತನ್ನನ್ನು ನೇಮಿಸಿದ್ದರು. ಆಶ್ರಮಕ್ಕೆ ಸೇರಿದ ಕೆಲವೇ ದಿನಗಳಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ‘‘ ಎಂದು ಸಂತ್ರಸ್ತ ಬಾಲಕಿ ತಾನು ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಆ ಬಳಿಕ ’’ಪೂರ್ಣಾನಂದ ಸ್ವಾಮಿ ನಿತ್ಯ ತನ್ನನ್ನು ಕೋಣೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸುತ್ತಿದ್ದರು. ಅಲ್ಲದೇ ಕೋಣೆಯೊಂದರಲ್ಲಿ ಕಾಲಿಗೆ ಸರಪಳಿ ಕಟ್ಟಿ ಎಲ್ಲಿಗೂ ಕದಲದಂತೆ ಬಂಧಿಸಿದ್ದರು. ಸ್ವಲ್ಪ ಕದಲಿದರೂ ಹಲ್ಲೆ ನಡೆಸುತ್ತಿದ್ದರು. ಊಟವನ್ನೂ ಕೊಡದೆ ಹಿಂಸಿಸಿ, ಎರಡು ಚಮಚದಷ್ಟು ಅನ್ನವನ್ನು ನೀರಿಗೆ ಬೆರಸಿ ಕೊಡುತ್ತಿದ್ದರು. ಅಷ್ಟೇ ಅಲ್ಲದೇ ಮಲಮೂತ್ರ ವಿಸರ್ಜನೆಗೂ ಬಿಡದೇ ಬಕೆಟ್ವೊಂದರಲ್ಲೇ ಎಲ್ಲವನ್ನು ಮಾಡುವಂತೆ ಕಟ್ಟಿ ಹಾಕಿದ್ದರು. ಎರಡು ವಾರಕ್ಕೊಮ್ಮೆ ಮಾತ್ರ ಸ್ನಾನಕ್ಕೆ ಬಿಡುತ್ತಿದ್ದರು‘‘ ಎಂದು ಸಂತ್ರಸ್ತ ಬಾಲಕಿ ಹೇಳಿದ್ದಾಳೆ.
ನಂತರ ’’ಜೂನ್ 13 ರಂದು ಆಶ್ರಮದಿಂದ ಅಲ್ಲಿಯ ಸೇವಕಿಯ ಸಹಾಯದಿಂದ ತಪ್ಪಿಸಿಕೊಂಡೆ. ಅಲ್ಲಿಂದ ನೇರವಾಗಿ ರೈಲು ನಿಲ್ದಾಣಕ್ಕೆ ತೆರಳಿ ತಿರುಮಲ ಎಕ್ಸ್ಪ್ರೆಸ್ ರೈಲು ಹತ್ತಿದೆ. ಬಳಿಕ ಆ ರೈಲಿನಲ್ಲಿ ಭೇಟಿಯಾದ ಮಹಿಳೆಯೊಬ್ಬರಿಗೆ ನಡೆದ ವಿಷಯದ ಬಗ್ಗೆ ಹೇಳಿದೆ. ಇದರಿಂದ ಬೇಸರಗೊಂಡ ಆ ಮಹಿಳೆ ತನ್ನನ್ನು ಕೃಷ್ಣಾ ಜಿಲ್ಲೆಯ ಕಂಕಿಪಾಡುವಿನ ಹಾಸ್ಟೆಲ್ಗೆ ಸೇರಿಸಲು ಪ್ರಯತ್ನಿಸಿದರು. ಆದರೆ, ಹಾಸ್ಟೆಲ್ ಆಡಳಿತ ಮಂಡಳಿಯು ಯಾರೆಂದೂ ಗೊತ್ತಿಲ್ಲದ ಬಾಲಕಿಯನ್ನು ಸೇರಿಸಿಕೊಳ್ಳಲು ಪೊಲೀಸ್ ಠಾಣೆಯಿಂದ ಅನುಮತಿ ಪತ್ರ ತೆಗೆದುಕೊಂಡು ಬರಲು ಹೇಳಿದರು. ಈ ಹಿನ್ನೆಲೆ ಕಂಕಿಪಾಡು ಠಾಣೆಗೆ ತೆರಳಿ ಅಲ್ಲಿ ನಡೆದ ಘಟನೆ ಬಗ್ಗೆ ಹೇಳಿದರು ಬಳಿಕ ಅನುಮತಿ ಪತ್ರ ತೆಗೆದುಕೊಂಡು ಸಿಡಬ್ಲ್ಯೂಸಿಗೆ ಹೋದೆ. ವಿಜಯವಾಡದ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಆಶ್ರಮದಲ್ಲಿ ಅನುಭವಿಸಿದ ನರಕಯಾತನೆ ಬಗ್ಗೆ ವಿವರಿಸಲಾಯಿತು. ಆಶ್ರಮದಲ್ಲಿ 14 ಮಕ್ಕಳಿದ್ದು, ಅದರಲ್ಲಿ ತಾನೊಬ್ಬಳೇ ಹೆಣ್ಣು ಎಂದು ವಿವರಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪದ ಬಗ್ಗೆ ಸ್ವಾಮೀಜಿ ಹೇಳಿದ್ದೇನು?: ಈ ಬಗ್ಗೆ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಆಶ್ರಮ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದು, ಅದರ ಭಾಗವಾಗಿ ನನ್ನ ವಿರುದ್ಧ ಈ ಷಡ್ಯಂತ್ರ ಮಾಡಲಾಗಿದೆ. ಈ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದೂರಿನ ಪ್ರಕಾರ ಪೂರ್ಣಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ನಿನ್ನೆ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.