ನ್ಯೂಸ್ ನಾಟೌಟ್: ಮಳೆಗಾಲ ಆರಂಭವಾದ ಬೆನ್ನಲ್ಲೇ ಚಾರ್ಮಾಡಿ ಘಾಟಿಯ ಸೊಬಗು ನೋಡುಗರ ಕಣ್ಮನ ಸೆಳೆಯುತ್ತಿದೆ. ತೊರೆ,ಹಳ್ಳ, ಜಲಪಾತಗಳು ತುಂಬಿಕೊಂಡು ಆಕರ್ಷಕವಾಗಿವೆ. ಇಂತಹ ಸನ್ನಿವೇಶದಲ್ಲಿ ಪ್ರವಾಸಿಗರು ಗುಂಪು ಗುಂಪಾಗಿ ಹೆದ್ದಾರಿಯಲ್ಲಿ ವಾಹನ ನಿಲ್ಲಿಸಿಕೊಂಡು ಡ್ಯಾನ್ಸ್ ಮಾಡುತ್ತಿದ್ದಾರೆ. ಇದರಿಂದ ಸುಗಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಅನ್ನುವ ಆರೋಪಗಳು ಕೇಳಿ ಬಂದಿದೆ.
ಜಲಪಾತ ಪರಿಸರಗಳಲ್ಲಿ ವಾಹನ ನಿಲ್ಲಿಸಿ ರಸ್ತೆ ಮಧ್ಯೆ ಬಂದು ನೃತ್ಯ ಮಾಡುವುದು ಕೇಕೆ ಹಾಕುತ್ತಿರುವ ಪ್ರಸಂಗ ನಡೆಯುತ್ತಿದೆ. ಹಲವು ಪ್ರವಾಸಿಗರು ಇತರ ವೀಕ್ಷಕರಿಗೆ ಮುಜುಗರದ ವಾತಾವರಣ ಸೃಷ್ಟಿಸಿದ್ದಾರೆ. ಹಲವು ವಾಹನ ಸವಾರರಿಗೆ ರಸ್ತೆಯಲ್ಲಿ ನಿರ್ಮಾಣವಾದ ಇಂತಹ ವಾತಾವರಣದಿಂದ ಕಿರಿಕಿರಿ ಅನುಭವ ಆಯಿತು. ಕೆಲವರು ಮಾತಿನ ಚಕಮಕಿಯನ್ನೂ ನಡೆಸಿದರು. ಸದಾ ರಸ್ತೆಯನ್ನು ಆಕ್ರಮಿಸಿದ ಹಲವು ಪ್ರವಾಸಿಗರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾದ ಸನ್ನಿವೇಶಗಳು ಕಂಡುಬಂದವು. ಇದರ ಜತೆ ಜಾರುವ ಬಂಡೆಗಳನ್ನು ಏರುವುದು ಮಕ್ಕಳನ್ನು ಹತ್ತಿಸಿ ಫೋಟೋ ಕ್ಲಿಕ್ಕಿಸುವುದು ಕಂಡುಬಂತು. ಅಪಾಯಕಾರಿ ತೊರೆಗಳಿಗೆ ಇಳಿದು ಮೋಜು-ಮಸ್ತಿ ನಡೆಸುವವರ ಸಂಖ್ಯೆಯೂ ಇತ್ತು.
ಪ್ರವಾಸಿಗರ,ವಾಹನ ಸವಾರರ ಸುರಕ್ಷತೆ ಕಾಪಾಡಬೇಕಾದ ಅರಣ್ಯ, ಪೊಲೀಸ್ ಇಲಾಖೆ ಚಾರ್ಮಾಡಿ ಘಾಟಿ ಪರಿಸರದಲ್ಲಿ ನಡೆಯುತ್ತಿರುವ ಅನಗತ್ಯ ಚಟುವಟಿಕೆಗಳತ್ತ ಗಮನಹರಿಸಬೇಕಿದೆ.ಚಿಕ್ಕಮಗಳೂರು ವಿಭಾಗದಲ್ಲಿ ಹೆಚ್ಚಿನ ಜಲಪಾತ,ತೊರೆ,ಹಳ್ಳಗಳಿದ್ದು ಈ ಪ್ರದೇಶದಲ್ಲಿ ವಾಹನ ಸವಾರರಿಗೆ ಪ್ರವಾಸಿಗರಿಂದ ಭಾರಿ ಸಮಸ್ಯೆ ಇದ್ದರೂ ಇಲ್ಲಿ ಯಾವುದೇ ಗಸ್ತು, ಅಗತ್ಯ ಸೂಚನಾ ಫಲಕಗಳು ಇಲ್ಲದಿರುವುದು ವಿಪರ್ಯಾಸವಾಗಿದೆ. ಇತ್ತೀಚೆಗೆ ಬಣಕಲ್ ನ ಸಂಘವೊಂದು ಘಾಟಿ ಪ್ರದೇಶದಲ್ಲಿ ಪ್ರವಾಸಿಗರ ಮೋಜು-ಮಸ್ತಿ ವಿರೋಧಿಸಿ ಅಭಿಯಾನ ನಡೆಸಿದ್ದರೂ ಅದು ಯಾವುದೇ ಪ್ರಯೋಜನವಾಗಿಲ್ಲ.