ನ್ಯೂಸ್ ನಾಟೌಟ್: ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತನ್ನ ಪಂದ್ಯಗಳನ್ನು ತಟಸ್ಥ ತಾಣದಲ್ಲಿ ಆಡುವಂತೆ ಒತ್ತಾಯಿಸಿದರೆ ಭಾರತದಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್ನಲ್ಲೂ ಸಮಾನ ಬೇಡಿಕೆಯನ್ನು ಮುಂದಿಡಲಿದ್ದೇವೆ ಎಂದು ಪಾಕಿಸ್ತಾನದ ಕ್ರೀಡಾ ಸಚಿವ ಎಹ್ಸಾನ್ ಮಜಾ ಹೇಳಿದ್ದಾರೆ.
‘ಇಂಡಿಯನ್ ಎಕ್ಸ್ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಎಹ್ಸಾನ್ ಮಾತನಾಡಿದ್ದಾರೆ. ನನ್ನ ವೈಯಕ್ತಿಕ ಅಭಿಪ್ರಾಯ ಏನೆಂದರೆ ಏಷ್ಯಾ ಕಪ್ನಲ್ಲಿ ಭಾರತ ತನ್ನ ಪಂದ್ಯಗಳನ್ನು ತಟಸ್ಥ ತಾಣಗಳಲ್ಲಿ ಆಡುವಂತೆ ಒತ್ತಾಯಿಸಿದರೆ, ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯಗಳಿಗೂ ನಾವು ಅದೇ ಬೇಡಿಕೆಯನ್ನು ಇಡಲಿದ್ದೇವೆ ಎಂದು ಎಹ್ಸಾನ್ ಹೇಳಿದ್ದಾರೆ.
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನದ ತಂಡವು ಪಾಲ್ಗೊಳ್ಳುವ ಕುರಿತಂತೆ ನಿರ್ಧರಿಸಲು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಪ್ರಧಾನಿ ಶಹಬಾಜ್ ಷರೀಫ್ ರಚಿಸಿದ್ದಾರೆ. ಎಹ್ಸಾನ್ ಮಜಾ ಕೂಡ ಇದರ ಸದಸ್ಯರು. ಪಾಕಿಸ್ತಾನ ಅತಿಥ್ಯ ವಹಿಸುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಇತ್ತೀಚೆಗೆ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಬಿಡುಗಡೆ ಮಾಡಿದ್ದ ಪ್ರಕಟಣೆ ಪ್ರಕಾರ ಭಾರತ ತನ್ನ ಪಂದ್ಯಗಳನ್ನು ತಟಸ್ಥ ತಾಣಗಳಲ್ಲಿ ಆಡಲಿದೆ. ಮತ್ತೂಂದೆಡೆ ಭಾರತ ಅತಿಥ್ಯ ವಹಿಸುವ ಏಕದಿನ ವಿಶ್ವಕಪ್ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿದೆ. ಪಾಕಿಸ್ತಾನದ ಪಂದ್ಯಗಳು ಅಹಮದಾಬಾದ್, ಹೈದರಾಬಾದ್, ಚೈನ್ನೈ, ಬೆಂಗಳೂರು ಮತ್ತು ಕೋಲ್ಕತ್ತ ನಗರಗಳಲ್ಲಿ ನಿಗದಿಯಾಗಿವೆ.