ನ್ಯೂಸ್ ನಾಟೌಟ್ : ಸಿನಿಮಾ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡ ನಟ ನೀನಾಸಂ ಅಶ್ವತ್ಥ್ ಅವರನ್ನು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಪೊಲೀಸರು ಶನಿವಾರ(ಜುಲೈ 8) ಬಂಧಿಸಿದ್ದಾರೆ.
ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ಕಿರುತೆರೆಯಲ್ಲಿಯೂ ಬೇಡಿಕೆಯ ನಟ ಎನಿಸಿಕೊಂಡಿದ್ದ ನೀನಾಸಂ ಅಶ್ವತ್ಥ್, ಸದ್ಯ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಹಲವು ಸಿನಿಮಾಗಳ ಕೆಲಸಗಳಲ್ಲಿಯೂ ಬಿಜಿಯಾಗಿದ್ದಾರೆ ಎನ್ನಲಾಗಿದೆ.
ಇದೀಗ ಇವರ ಮೇಲೆ ಚೆಕ್ ಬೌನ್ಸ್ ಕೇಸ್ ದಾಖಲಾಗಿದ್ದು, ಇತ್ತೀಚೆಗಷ್ಟೇ ಹಾಸನದಲ್ಲಿ ಹಸುವೊಂದನ್ನು ಖರೀದಿ ಮಾಡಿದ್ದ ಅಶ್ವತ್ಥ್, ಮಾಲೀಕರಿಗೆ ಚೆಕ್ ವಿತರಿಸಿದ್ದರು. ಹಾಗೆ ವಿತರಿಸಿದ ಚೆಕ್ ಅನ್ನು ಬ್ಯಾಂಕ್ಗೆ ಹಾಕಿದಾಗ ಅದು ಬೌನ್ಸ್ ಆಗಿದೆ. ಕೂಡಲೇ ಹಸು ನೀಡಿದ್ದ ರೋಹಿತ್ ಎಂಬುವವರು ಹಾಸನದ ಜೆಎಂಎಫ್ಸಿ ಕೋರ್ಟ್ನಲ್ಲಿ ದಾವೆ ಹೂಡಿದ್ದರು.
ದೂರು ಆಧರಿಸಿ, ಅಶ್ವತ್ಥ್ ಅವರನ್ನು ಹಾಸನ ನಗರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯದಲ್ಲಿ ಆದ ತಪ್ಪನ್ನು ಅಶ್ವತ್ಥ್ ಒಪ್ಪಿಕೊಂಡಿದ್ದು, ಇನ್ನುಳಿದ ಹಣವನ್ನು ನೀಡಲು ಗಡುವು ಪಡೆದುಕೊಂಡಿದ್ದಾರೆ.
ನಟ ಅಶ್ವತ್ಥ್ ವಿರುದ್ಧ ಈ ರೀತಿ ಕೇಸ್ ದಾಖಲಾಗಿದ್ದು ಇದೇ ಮೊದಲೇನಲ್ಲ. ಕಳೆದ ನಾಲ್ಕು ವರ್ಷದ ಹಿಂದೆಯೂ, ಮಂಡ್ಯ ಬಳಿ ಫಾರ್ಮ್ಹೌಸ್ ಮಾಡುವ ಸಲುವಾಗಿ ಸ್ನೇಹಿತನಿಂದ 18 ಲಕ್ಷ ಹಣ ಪಡೆದು, ಮರಳಿ ನೀಡದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು.