ನ್ಯೂಸ್ ನಾಟೌಟ್: ಪಂಚಾಯತ್ ಚುನಾವಣಾ ಕಣ ರಣಾಂಗಣವಾಗಿ ನಡೆದ ಭಾರಿ ಹಿಂಸಾಚಾರದಲ್ಲಿ 12 ಮಂದಿ ಸಾವಿಗೀಡಾಗಿದ್ದಾರೆ. ಈ ಘಟನೆ ಶನಿವಾರ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಹಲವಾರು ವಾಹನಗಳು ಧ್ವಂಸಗೊಂಡಿವೆ.
ಸಾವಿಗೀಡಾದವರಲ್ಲಿ ಕನಿಷ್ಠ ಐವರು ಟಿಎಂಸಿ ಕಾರ್ಯಕರ್ತರು ಮತ್ತು ಮೂವರು ಸಿಪಿಎಂ ಪಕ್ಷದ ಕಾರ್ಯಕರ್ತರು, ಒಬ್ಬರು ಸ್ವತಂತ್ರ ಅಭ್ಯರ್ಥಿ ಮತ್ತು ಇನ್ನೊಬ್ಬರು ಬಿಜೆಪಿ ಪಕ್ಷದ ಕಾರ್ಯಕರ್ತರು ಎಂದು ತಿಳಿದು ಬಂದಿದೆ. ದೀದಿ ಮಮತಾ ಬ್ಯಾನರ್ಜಿ ಆಡಳಿತದ ರಾಜ್ಯದಲ್ಲಿ ರಕ್ತಪಾತ ನಡೆದು ಈಗ ಹೆಣಗಳ ರಾಶಿಯೇ ಬಿದ್ದಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಎಲ್ಲ ರಾಜ್ಯಗಳಲ್ಲಿ ನಡೆಯುವಂತೆ ಪಶ್ಚಿಮ ಬಂಗಾಳದಲ್ಲಿಯೂ ಗ್ರಾಮ ಪಂಚಾಯತ್ ಚುನಾವಣೆಯನ್ನು ಆಯೋಜಿಸಲಾಗಿತ್ತು. ಈ ನಡುವೆ ಹಿಂಸಾಚಾರ ಬುಗಿಲೆದ್ದಿದೆ. ಪೂರ್ವ ಮಿಡ್ನಾಪುರ, ಕೂಚ್ಬೆಹಾರ್ ಸೇರಿ 24 ಜಿಲ್ಲೆಗಳಲ್ಲಿ ಕೆಲವು ಹಿಂಸಾಚಾರದ ವರದಿಯಾಗಿವೆ. ಕಳೆದ ಕೆಲವು ದಿನಗಳಿಂದ ಈ ಬಗ್ಗೆ ಸಂಭವಿಸಿದ ಸಾವಿನ ಸಂಖ್ಯೆಯನ್ನು ಸೇರಿಸಿದರೆ, ಒಟ್ಟು 27ಕ್ಕೆ ಆಗಿದೆ. ಕೆಲವು ಕಡೆ ಬ್ಯಾಲೆಟ್ ಬಾಕ್ಸ್ಗೆ ಬೆಂಕಿ ಹಚ್ಚಲಾಗಿದೆ. ಇನ್ನೂ ಕೆಲವು ಕಡೆ ಮತಗಟ್ಟೆಗೆ ನುಗ್ಗಿ ದಾಂಧಲೆ ನಡೆಸಲಾಗಿದೆ.
ಕೂಚ್ ಬೆಹಾರ್ ಜಿಲ್ಲೆಯ ಸತಾಯಿ ಸ್ಕೂಲ್ ಮತಗಟ್ಟೆಯಲ್ಲಿ ಅಟ್ಟಹಾಸ ಮೆರೆದ ಪುಂಡರ ಗುಂಪು ಬೆಂಚು, ಮೇಜು ಧ್ವಂಸಗೊಳಿಸಿ ಬೆಂಕಿ ಹಚ್ಚಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಪಶ್ಚಿಮ ಬಂಗಾಳದ ಮುರ್ಶಿದಾಬಾದ್ನಲ್ಲಿ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಹಲವೆಡೆ ಕಲ್ಲು ತೂರಾಟ, ಪಿಸ್ತೂಲ್ ಸದ್ದು ಮಾಡಿದೆ. ಈ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.