ನ್ಯೂಸ್ ನಾಟೌಟ್: ದ.ಕ. ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಇದರಿಂದಾಗಿ ವಿಮಾನ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ಮುಂಬೈ ಮತ್ತು ದುಬೈನಿಂದ ಆಗಮಿಸಿದ್ದ ವಿಮಾನಗಳು ತಡವಾಗಿ ಲ್ಯಾಂಡ್ ಆದ ಘಟನೆ ನಡೆದಿದೆ.
ಹವಾಮಾನ ವೈಪರೀತ್ಯದಿಂದಾಗಿ ಹೈದರಾಬಾದ್ನಿಂದ ಆಗಮಿಸಿದ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗದೆ ಗೋವಾಕ್ಕೆ ತೆರಳಿ ಮತ್ತೆ ವಾಪಾಸ್ ಬಂದು ಲ್ಯಾಂಡ್ ಆದ ಘಟನೆ ನಡೆದಿದೆ.
ಕಳೆದ ಕೆಲವು ದಿನಗಳಿಂದ ಕರಾವಳಿಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಹಲವಡೆ ಸಾವು ನೋವುಗಳು ಸಂಭವಿಸಿದೆ. ಇದರಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳವಾರದಿಂದ ಶುಕ್ರವಾರದವರೆಗೆ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದರು. ಶುಕ್ರವಾರ ಮಳೆ ಕೊಂಚ ಬಿಡುವು ನೀಡಿದ ಹಿನ್ನೆಲೆಯಲ್ಲಿ ಶನಿವಾರ ಶಾಲೆ ಕಾಲೇಜಿಗಳಿಗೆ ರಜೆ ನೀಡಿರಲಿಲ್ಲ. ಶನಿವಾರ ಮುಂಜಾನೆಯಿಂದ ಮತ್ತೆ ಬಿರುಸು ಪಡೆದಿದೆ. ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಮಳೆ ಹಾನಿ ಸಂಭವಿಸಿದೆ. ಮಳೆಯಿಂದಾಗಿ ನಾಲ್ವರು ಸಾವನ್ನಪ್ಪಿದ್ದು, ಓರ್ವ ನೀರುಪಾಲಾಗಿದ್ದಾನೆ. ಹಲವಾರು ಮನೆಗಳು ಜಲಾವೃತಗೊಂಡಿವೆ.