ನ್ಯೂಸ್ ನಾಟೌಟ್: ನಾಪತ್ತೆಯಾಗಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನ ಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರನ್ನು (Acharya Shri 108 Kamkumarnandi Maharaj) ಹತ್ಯೆ ಮಾಡಲಾಗಿರುವ ಆತಂಕಕಾರಿ ವಿಚಾರ ಹೊರ ಬಿದ್ದಿದೆ. ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಜು.5ರ ರಾತ್ರಿ ಆಶ್ರಮದಲ್ಲಿದ್ದ ಮುನಿಗಳು, ಜು.6ರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದರು. ಈ ಕುರಿತು ಭಕ್ತರು ಜೈನ ಬಸದಿಯ ಸುತ್ತಮುತ್ತ ಹುಡುಕಾಟ ನಡೆಸಿದ್ದರು. ಆದರೆ, ಎಲ್ಲಿಯೂ ಮುನಿಗಳು ಪತ್ತೆಯಾಗದ ಕಾರಣ ಆಚಾರ್ಯ ಕಾಮಕುಮಾರನಂದಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ಚಿಕ್ಕೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ನಾಪತ್ತೆ ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಚಿಕ್ಕೋಡಿ ಪೊಲೀಸರು ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಹುಡುಕಾಟ ಶುರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ವಿಚಾರಣೆ ನಡೆಸಿದಾಗ ಹತ್ಯೆ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಆದರೆ, ಇನ್ನೂ ನಿನ್ನೆಯಿಂದ ಜೈನಮುನಿ ಮೃತದೇಹ ಪತ್ತೆಯಾಗದ ಕಾರಣ ಶನಿವಾರ ಮುಂಜಾನೆಯಿಂದ ಮತ್ತೆ ಮೃತದೇಹದ ಹುಡುಕಾಟ ಆರಂಭಿಸಿದ್ದಾರೆ.
ಇನ್ನು ಕೊಲೆ ಬಳಿಕ ಜೈನಮುನಿ ಶವ ಬಿಸಾಕಿರುವ ಬಗ್ಗೆ ಆರೋಪಿಗಳು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಒಮ್ಮೆ ಶವವನ್ನು ಕತ್ತರಿಸಿ ಖಟಕಬಾವಿ ಗ್ರಾಮದ ಗದ್ದೆಯ ಕೊಳವೆಬಾವಿಗೆ ಎಸೆದಿದ್ದೇವೆ ಎಂದ ಆರೋಪಿಗಳು, ಮತ್ತೊಮ್ಮೆ ಶವವನ್ನು ನದಿಗೆ ಎಸೆದಿದ್ದೇವೆ ಎನ್ನುತ್ತಿದ್ದಾರೆ. ಇನ್ನು ಜೈನಮುನಿ ಮೃತದೇಹಕ್ಕಾಗಿ ಖಟಕಬಾವಿ ಗ್ರಾಮ ಸೇರಿ ವಿವಿಧೆಡೆ ರಾತ್ರಿಯಿಡಿ ಪೊಲೀಸರು ಶೋಧ ನಡೆಸಿದ್ದಾರೆ.