ನ್ಯೂಸ್ ನಾಟೌಟ್: ಖಾಸಗಿ ಶಾಲೆಯೊಂದರ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಿದ್ದರು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿದ್ಯಾರ್ಥಿನಿಯರ ಪೋಷಕರಿಗೆ ಗೊತ್ತಾಗಿ ಕೂಡಲೇ ಶಾಲೆಗೆ ನುಗ್ಗಿದ ಸಂಘಟನೆಗಳ ಸದಸ್ಯರು ಮತ್ತು ಪೋಷಕರು ಶಾಲೆಯ ಪ್ರಾಂಶುಪಾಲರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ತಲೆಗಾಂವ್ ಎಂಬಲ್ಲಿ ಈ ಘಟನೆ ನಡೆದಿದ್ದು, ಶಾಲೆಯ ವಿದ್ಯಾರ್ಥಿನಿಯರ ಶೌಚಾಲಯಕ್ಕೆ ಸಿಸಿಟಿವಿ ಅಳವಡಿಸಿದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ವಿರೋಧಿಸಿದ್ದಾರೆ ಎನ್ನಲಾಗಿದೆ. ಆದರೆ, ಶಾಲೆಯ ಪ್ರಾಂಶುಪಾಲರು ವಿದ್ಯಾರ್ಥಿನಿಯರ ಮನವಿಯನ್ನು ಪರಿಗಣಿಸಲಿಲ್ಲ. ಹೀಗಾಗಿ, ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ. ಪೋಷಕರು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅಷ್ಟರಲ್ಲಾಗಲೇ ಪುಣೆಯ ಬಲ ಪಂಥೀಯ ಸಂಘಟನೆಗಳ ಸದಸ್ಯರಿಗೆ ವಿಷಯ ಗೊತ್ತಾಗಿದೆ.
ಅವರು ಶಾಲೆಗೆ ನುಗ್ಗಿ ಪ್ರಾಂಶುಪಾಲರ ಬಟ್ಟೆ ಹರಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆಯ ವಿಡಿಯೋ ಕೂಡಾ ವೈರಲ್ ಆಗಿದೆ. ಈ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಶೌಚ ಗೃಹದಲ್ಲಿ ಸಿಸಿಟಿವಿ ಅಳವಡಿಕೆ ಮಾಡಿದ್ದಷ್ಟೇ ಅಲ್ಲ, ಎಲ್ಲ ವಿದ್ಯಾರ್ಥಿಗಳಿಗೂ ಬೈಬಲ್ ಪಠಣ ಮಾಡುವಂತೆ ಪ್ರಾಂಶುಪಾಲರು ಆಗ್ರಹಿಸುತ್ತಿದ್ದರು ಎಂದೂ ಪೋಷಕರು ಸಲ್ಲಿಸಿರುವ ದೂರಿನಲ್ಲಿ ವಿವರಿಸಲಾಗಿದೆ.
ಅಷ್ಟೇ ಅಲ್ಲ, ವಿದ್ಯಾರ್ಥಿಗಳಿಗೆ ಹಿಂದೂ ಹಬ್ಬ ಹರಿದಿನಗಳಂದು ರಜೆ ನೀಡುತ್ತಿರಲಿಲ್ಲವಂತೆ. ಕ್ರೈಸ್ತರ ಹಬ್ಬಗಳಂದು ಹೆಚ್ಚುವರಿ ರಜೆ ಸಿಗುತ್ತಿತ್ತು ಎಂದೂ ದೂರಿನಲ್ಲಿ ವಿವರಿಸಿದ್ದಾರೆ ಎಂದು ತಲೆಗಾಂವ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಂಜಿತ್ ಸಾವಂತ್ ಮಾಧ್ಯಮಗಳಿಗೆ ತಿಳಿಸಿದ್ಧಾರೆ.
ಇದೀಗ ಪೋಷಕರ ದೂರಿನ ಕುರಿತಾಗಿ ಪೊಲೀಸರು ತನಿಖೆ ಆರಂಭಿಸಿದ್ದು, ಖಾಸಗಿ ಶಾಲೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕರನ್ನು ವಿಚಾರಣೆಗೆ ಒಳಪಡಿಸಿದ್ಧಾರೆ. ಇದೇ ವೇಳೆ ಏಟು ತಿಂದಿರುವ ಪ್ರಾಂಶುಪಾಲರು ಆಸ್ಪತ್ರೆ ಪಾಲಾಗಿದ್ದಾರೆ. ಇವರಿಗೆ ಥಳಿಸಿದ ವಿಡಿಯೋವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ಘಟನೆ ವಿಚಾರವಾಗಿಯೂ ಕ್ರಮ ಕೈಗೊಳ್ಳೋದಾಗಿ ಪೊಲೀಸರು ಭರವಸೆ ನೀಡಿದ್ಧಾರೆ.