ನ್ಯೂಸ್ ನಾಟೌಟ್: ಬೆಳ್ಳಾರೆ ಜಲದುರ್ಗ ಲಯನ್ಸ್ ಕ್ಲಬ್ ವತಿಯಿಂದ ಡಾ.ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎನ್ಎಸ್ಎಸ್ ಹಾಗೂ ರೋವರ್ಸ್ ರೇಂಜರ್ಸ್ ಘಟಕದ ಸಹಭಾಗಿತ್ವದಲ್ಲಿ ಗುರುವಾರ (ಜು.6) ಕಾಲೇಜಿನ ಆವರಣದಲ್ಲಿ ಸಾಮಾಜಿಕ ಅರಣ್ಯ ಗಿಡ ಹಾಗೂ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ದಾಮೋದರ ಕಣಜಾಲ್, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಕಾಲೇಜಿನ ವಿದ್ಯಾರ್ಥಿಗಳನ್ನೊಳಗೊಂಡು ಬೋಧನಾ ವರ್ಗವೂ ಸೇರಿ ಈ ಗಿಡಗಳನ್ನು ಬೆಳಸಿ ಸಂರಕ್ಷಿಸುವ ಜವಾಬ್ದಾರಿಯನ್ನು ಮಾಡಬೇಕಿದೆ ಎಂದು ಹೇಳಿ ಲಯನ್ಸ್ ಸಂಸ್ಥೆಯನ್ನು ಅಭಿನಂದಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ವಿಠಲ್ ಶೆಟ್ಟಿ ಪೆರ್ವಾಜೆ ಗಿಡಗಳನ್ನು ಹಸ್ತಾಂತರಿಸಿ ಮಾತನಾಡಿ, ಲಯನ್ಸ್ ಕ್ಲಬ್ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯ ಮಾಡಲು ಉದ್ದೇಶಿಸಿದ್ದೇವೆ. ಸ್ಥಳೀಯ ಸಂಸ್ಥೆಗಳು ಅದಕ್ಕೆ ಅವಕಾಶ ಕಲ್ಪಿಸಿದಾಗ ಸಾರ್ವಜನಿಕರಿಗೆ ಅದರಿಂದ ಪ್ರಯೋಜನವಾಗಲಿದೆ. ಈ ಕಾರ್ಯಕ್ರಮಕ್ಕೆ ಅವಕಾಶ ನೀಡಿದ ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಕೃತಜ್ಞತೆಗಳು ಸಲ್ಲಿಸಿದರು.
ಲಯನ್ಸ್ ವಿಸ್ತರಣಾಧಿಕಾರಿ ಆನಂದ ರೈ ಮಾತನಾಡಿ, ವನಮಹೋತ್ಸವ ಮಾಡಿ ಗಿಡ ನೆಟ್ಟ ನಂತರ ಅದನ್ನು ಸಂರಕ್ಷಿಸಿ ಪೋಷಿಸುವುದೂ ನಮ್ಮೆಲ್ಲರ ಜವಾಬ್ದಾರಿ. ಪರಿಸರ ಕಾಳಜಿಯ ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಲಿ ಎಂದರು.
ಲಯನ್ಸ್ ಸದಸ್ಯ ಪ್ರೀತಂ ರೈ ಪೆರ್ವಾಜೆ ಮಾತನಾಡಿ, ಈ ಪರಿಸರವು ಕಾಲೇಜು ನಿರ್ಮಾಣದ ಮೊದಲೇ ಸಮೃದ್ಧವಾದ ಮರಗಿಡಗಳಿಂದ ಕಂಗೊಳಿಸುತ್ತಿತ್ತು. ಕಟ್ಟಡ ನಿರ್ಮಾಣದ ಹಂತದಲ್ಲಿ ತೆರವುಗೊಳಿಸಿರುವ ಮರಗಳನ್ನು ಇಲ್ಲಿ ನೆಟ್ಟು ಬೆಳೆಸಿ ಹಳೆಯ ಪರಿಸರವನ್ನು ಪುನಃ ನಿರ್ಮಿಸೋಣ ಎಂದರು.
ಎನ್ ಎಸ್ ಎಸ್ ಘಟಕದ ಸಂಯೋಜಕ ಗಿರೀಶ್ ಸಿ.ಆರ್. ಕಾರ್ಯಕ್ರಮ ನಿರೂಪಿಸಿದರು. ರೋವರ್ಸ್ ಮತ್ತು ರೇಂಜರ್ಸ್ ಸುನಿತಾ ನಾಯ್ಕ್, ಲಯನ್ಸ್ ಕಾರ್ಯದರ್ಶಿ ದಯಾನಂದ ನಾಯ್ಕ್ ಮಠತಡ್ಕ, ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪೆರ್ವಾಜೆ, ಡಾ.ರಾಮಚಂದ್ರ, ಗೋವಿಂದ ರಾಜ್ ಉಪಸ್ಥಿತರಿದ್ದರು. ಕಾಲೇಜಿನ ಆವರಣದಲ್ಲಿ ತೇಗ, ಶ್ರೀಗಂಧ, ರಕ್ತ ಚಂದನದ ಗಿಡಗಳು ಹಾಗೂ ಸುಮಾರು 20ಕ್ಕೂ ಮಿಕ್ಕಿ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಈ ಸಂದರ್ಭದಲ್ಲಿ ನೆಡಲಾಯಿತು. ಕಾಲೇಜಿನ ಬೋಧಕ ಸಿಬ್ಬಂದಿ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಸಹಕರಿಸಿದರು.