ನ್ಯೂಸ್ ನಾಟೌಟ್ : ಮನುಷ್ಯ ಆರೋಗ್ಯವಂತನಾಗಿರಲು ದಿನದಲ್ಲಿ 20 ನಿಮಿಷಗಳಾದರೂ ನಗಬೇಕು ಅಂತಾರೆ.ಅದಕ್ಕಾಗಿಯೇ ನಗುವುದೇ ಒಂದು ರೀತಿಯ ವ್ಯಾಯಾಮ ಎನ್ನುವುದು ಹಲವರ ಅಭಿಪ್ರಾಯ. ಆದರೆ ಮನುಷ್ಯ ಸಂತೋಷದಿಂದಿದ್ದಾಗ ಮಾತ್ರ ನಗುವುದಕ್ಕೆ ಸಾಧ್ಯವಾಗುತ್ತೆ. ನಗು ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ ಅನ್ನೋದು ಕೂಡ ಸಾಬೀತಾಗಿದೆ.
ಆದರೆ ಅನೇಕರ ಮನಸ್ಸಲ್ಲಿ ಒಂದು ಪ್ರಶ್ನೆ ಸದಾ ಕಾಡುತ್ತಿರುತ್ತದೆ. ಕಚಗುಳಿ ಮಾಡುವಾಗ ಯಾಕೆ ನಗುತ್ತಾರೆ ಅನ್ನೋದು. ದೊಡ್ಡವರಿಂದ ಹಿಡಿದು ಸಣ್ಣ ಮಕ್ಕಳವರೆಗೂ ಕಚಗುಳಿ ಮಾಡಿದ್ರೆ ಜೋರಾದ ನಗು ಬರುತ್ತದೆ.ಎಲ್ಲಿಯವರೆಗೆ ಅಂದ್ರೆ ನಗುವನ್ನು ಕಂಟ್ರೋಲ್ ಮಾಡಲಾಗದ ಪರಿಸ್ಥಿತಿಯಲ್ಲಿಯರೆಗೆ ನಗು ಬರುತ್ತಿರುತ್ತೆ . ಹೆಚ್ಯಾಕೆ ನವಜಾತ ಶಿಶುಗಳಿಗೆ ಕೂಡ ಕಚಗುಳಿಯನ್ನು ಮಾಡಿದ್ರೆ ಮುಖದಲ್ಲಿ ನಗು ತರಿಸುತ್ತವೆ. ಆದರೆ ಈ ಕಚಗುಳಿಯಿಂದ ನಗು ಯಾಕೆ ಬರುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.
ನಗು ಸಮಾಜದಲ್ಲಿ ಉತ್ತಮ ಧನಾತ್ಮಕ ಬಾಂಧವ್ಯಗಳನ್ನೇ ಸೃಷ್ಟಿ ಮಾಡುತ್ತದೆ. ಒಬ್ಬ ವ್ಯಕ್ತಿಯು ಕಾಮಿಡಿ ಮಾಡಿದಾಗ ಆ ಸ್ಥಳದಲ್ಲಿ ಎಲ್ಲರೂ ನಗಲು ಪ್ರಾರಂಭಿಸುತ್ತಾರೆ.ಹಾಗೆಯೇ ನಮಗೆ ನಾವೇ ನಮ್ಮ ಕೈಗಳಿಂದ ದೇಹವನ್ನು ಸ್ಪರ್ಶಿಸಿದಾಗ ನಗು ಬರುವುದಿಲ್ಲ..ಇತರರು ಕಚಗುಳಿ ಮಾಡಿದಾಗ ಮಾತ್ರ ನಗು ನಿಯಂತ್ರಣಕ್ಕೆ ಬರುವುದಿಲ್ಲ.. ಹಾಗಾದರೆ ಕಚಗುಳಿ ಇಡುವುದರಿಂದ ತಡೆಯಲಾಗದಷ್ಟು ನಗು ಬರಲು ಕಾರಣವೇನು?ಇದಕ್ಕೆ ವೈಜ್ಞಾನಿಕ ಕಾರಣಗಳೇನಾದರೂ ಇದೆಯಾ ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡುತ್ತೆ. ವಿಕಸನೀಯ ಜೀವಶಾಸ್ತ್ರಜ್ಞರು ಮತ್ತು ನರವಿಜ್ಞಾನಿಗಳು ಹೇಳುವ ಪ್ರಕಾರ, ನಮ್ಮ ಮೆದುಳಿನ ಎರಡು ಭಾಗಗಳೇ ಕಚಗುಳಿ ಇಡುವ ಸಂವೇದನೆಗೆ ಕಾರಣವಾಗಿದೆಯಂತೆ. ಮೊದಲನೆಯದು ಸೊಮಾಟೊಸೆನ್ಸರಿ ಕಾರ್ಟೆಕ್ಸ್ (somatosensory cortex). ಇದು ಸ್ಪರ್ಶವನ್ನು ಗ್ರಹಿಸುವ ಭಾಗವಾಗಿದೆ ಎಂದು ಹೇಳುತ್ತಾರೆ. ಎರಡನೆಯದು ಮುಂಭಾಗದ ಸಿಂಗ್ಯುಲೇಟ್ ಕಾರ್ಟೆಕ್ಸ್ ಆಗಿದ್ದು, ಇದು ಸಂತೋಷ, ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಕೆಲಸ ಮಾಡುತ್ತದೆ ಎಂದು ವಿವರಿಸುತ್ತಾರೆ.ಅವರು ನಮಗೆ ಕಚಗುಳಿಯಾದರೆ ನಾವು ನಗುತ್ತೇವೆ ಎಂದು ನಂಬುತ್ತಾರೆ.ಏಕೆಂದರೆ ಮೆದುಳಿನ ಹೈಪೋಥಾಲಮಸ್ ಪ್ರದೇಶವು ಮೃದುವಾದ ಸ್ಪರ್ಶವನ್ನು ಅನುಭವಿಸಿದಾಗ ನಗುವ ಆಜ್ಞೆಯನ್ನು ನೀಡುತ್ತದೆ ಎಂದವರು ತಿಳಿಸುತ್ತಾರೆ.
ಇನ್ನು ತೋಳುಗಳ ಕೆಳಗೆ, ಗಂಟಲಿನ ಬಳಿ ಮತ್ತು ಪಾದದ ಕೆಳಗೆ ಕಚಗುಳಿ ಮಾಡಿದಾಗ ನಗುವುದನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕಚಗುಳಿ ಇಟ್ಟಾಗ ಕೂಗಿ, ಕುಣಿದು ಕುಪ್ಪಳಿಸುತ್ತೇವೆ.ಕೆಲವರು ಕಚಗುಳಿ ಇಡುವುದನ್ನು ಇಷ್ಟಪಡುವುದಿಲ್ಲ. ಅವುಗಳಲ್ಲಿನ ನರಗಳು ತೀವ್ರವಾದ ಒತ್ತಡದಲ್ಲಿವೆ ಮತ್ತು ಕೋಪವನ್ನು ತೋರಿಸುತ್ತವೆ ಎನ್ನಲಾಗಿದೆ. ಇನ್ನು ನಮಗೆ ನಾವೇ ಕಚಗುಳಿ ಮಾಡಿದಾಗ ಮಿದುಳಿನ ಹಿಂಭಾಗದಲ್ಲಿರುವ ಸೆರೆಬೆಲ್ಲಮ್ ಮೆದುಳಿಗೆ ನೀವೇ ಸ್ಕ್ರಾಚ್ ಮಾಡಲಿದ್ದೀರಿ ಎಂದು ಮುಂಚಿತವಾಗಿ ಸಂಕೇತಿಸುವಂತಹ ಸಂದೇಶ ನಮಗೆ ರವಾನೆಯಾಗುತ್ತೆ. ಇದರಿಂದಾಗಿ ಮೆದುಳು ಸರಿಯಾದ ಸಂಕೇತಗಳನ್ನು ನೀಡುವುದಿಲ್ಲ ಎಂದು ಹೇಳಲಾಗಿದೆ. ಅದಕ್ಕೇ ನಾವು ನಮ್ಮನ್ನು ನೋಡಿ ನಗುವುದಿಲ್ಲ ಎಂದು ಹೇಳಲಾಗಿದೆ.