ನ್ಯೂಸ್ ನಾಟೌಟ್: ಭಾರಿ ಮಳೆಗೆ ಮಂಗಳೂರು ಹೊರ ವಲಯದ ಸೋಮೇಶ್ವರ ಪಿಲಾರು ಎಂಬಲ್ಲಿ ಮನೆ ಸಮೀಪದ ಕಾಲು ಸಂಕ ದಾಟುವ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟ ಪಿಲಾರು ಬಳಿಯ ನಿವಾಸಿ ಸುರೇಶ್ ಗಟ್ಟಿ(52) ಅವರ ಕುಟುಂಬಕ್ಕೆ ಪ್ರಾಕೃತಿಕ ವಿಕೋಪದಡಿ ರೂ.5 ಲಕ್ಷ ಪರಿಹಾರ ವಿತರಿಸಲಾಯಿತು.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರಭಾಕರ್ ಖರ್ಜುರೆ ಭೇಟಿ ನೀಡಿ ಪರಿಹಾರದ ಚೆಕ್ ವಿತರಿಸಿದರು. ಪರಿಹಾರ ಧನವನ್ನು ಪತ್ನಿ ಶಾಂಭ ಅವರಿಗೆ ತಹಶೀಲ್ದಾರ್ ವಿತರಿಸಿದರು.
ಕಳೆದ ಎರಡು ದಿನಗಳಿಂದ ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಅವಾಂತರ ಸೃಷ್ಟಿಸಿದೆ. ಮಂಗಳವಾರ ಪೈಂಟಿಂಗ್ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಸುರೇಶ್ ಗಟ್ಟಿ ಅವರು ಮನೆ ಸಮೀಪದ ಕಾಲು ಸಂಕ ದಾಟುವ ವೇಳೆ ಆಯತಪ್ಪಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದರು.
ಮತ್ತೊಂದು ಪ್ರಕರಣದಲ್ಲಿ ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಕುಳಾಯಿಯಲ್ಲಿ ಕಡಿದು ಬಿದ್ದ ವಿದ್ಯುತ್ ತಂತಿ ತುಳಿದು ಮೃತಪಟ್ಟ ಕುಷ್ಟಗಿ ಮೂಲದ ಸಂತೋಷ್ (28) ಕುಟುಂಬಕ್ಕೂ ಮೆಸ್ಕಾಂ ವತಿಯಿಂದ ರೂ.5 ಲಕ್ಷ ಪರಿಹಾರ ನೀಡಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಬಿರುಗಾಳಿ ಸಹಿತ ಭಾರಿ ಮಳೆಗೆ ವಿದ್ಯುತ್ ತಂತಿ ಕಡಿದು ರಸ್ತೆಗೆ ಬಿದ್ದಿತ್ತು. ಬುಧವಾರ ( ಜು.5) ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದಾಗ ಸಂತೋಷ್ ವಿದ್ಯುತ್ ತಂತಿ ತುಳಿದು ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದರು.