ನ್ಯೂಸ್ ನಾಟೌಟ್: ಕನ್ನಡ ನಟಿಯೋರ್ವರು ಬೆಂಗಳೂರಿನ ಡಯೋಗ್ನೆಟಿಕ್ ಸೆಂಟರ್ಗೆ ಭೇಟಿ ನೀಡಿದಾಗ ಅಲ್ಲಿ ಅವರಿಗೆ ಕೊನೆಯ ಹಂತದ ಕ್ಯಾನ್ಸರ್ನಿಂದ ಬಳಲುತ್ತಿದ್ದೀರಿ ಎಂದು ವರದಿ ನೀಡಿದ್ದರು. ಆ ನಂತರ ಆ ನಟಿ ಬೇರೆ ಸೆಂಟರ್ಗಳಿಗೆ ಹೋಗಿ ಮತ್ತೊಮ್ಮೆ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡಾಗ ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕ ನ್ಯಾಯಾಲಯವು ಇತ್ತೀಚೆಗೆ ಆ ನಟಿಗೆ 1.5 ಲಕ್ಷ ರೂಪಾಯಿ ಪರಿಹಾರಧನ ನೀಡುವಂತೆ ಆದೇಶಿಸಿದೆ.
2022 ಫೆಬ್ರವರಿ 25ರಂದು ಹೆಸರು ಹೇಳಲು ಇಚ್ಛಿಸದ ನಟಿಯು ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಡಯೋಗ್ನೆಟಿಕ್ ಸೆಂಟರ್ಗೆ ಚೆಕಪ್ ಮಾಡಿಸಲು ಹೋದಾಗ ಅಲ್ಲಿನ ವೈದ್ಯ ಡಾ. ರಾಜ್ಕಮಲ್ ಅವರು Fibrosarcoma Uterus with abdominal metastasis, Liver Metastasis and Grade 1 Splenomegaly ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದೀರಿ ಎಂದು ತಿಳಿಸಿದ್ದರು. ಅದನ್ನು ಕೇಳಿ ನಟಿಗೆ ಶಾಕ್ ಆಗಿತ್ತು, ಈ ವಿಚಾರವನ್ನು ಹೇಗೆ ತಂದೆ-ತಾಯಿಗೆ ಹೇಳೋದು ಅಂತ ಕಳವಳಗೊಳಗಾಗಿದ್ದ ನಟಿ ತನ್ನ ಅನುಮಾನ ದೂರ ಮಾಡಲು ಬೆಂಗಳೂರಿನಲ್ಲಿರುವ ಇನ್ನೂ ಎರಡು ಸೆಂಟರ್ಗಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
ಆಗ ಆರೋಗ್ಯವಾಗಿದ್ದಾರೆ ಎಂದು ವರದಿ ಬಂದಿದೆ. ಇನ್ನುಳಿದ ಸೆಂಟರ್ಗಳು ಮೊದಲ ರಿಪೋರ್ಟ್ ಫೇಕ್ ಎಂದು ತಿಳಿಸಿದಾಗ ಆ ನಟಿ ನಿಟ್ಟುಸಿರು ಬಿಟ್ಟಿದ್ದಾರೆ.
ಬಳಿಕ ನಟಿ ಆ ಸೆಂಟರ್ ವಿರುದ್ಧ ಮೊದಲ ಹೆಚ್ಚುವರಿ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ವಾದ ಆಲಿಸಿದ ಗ್ರಾಹಕ ಆಯೋಗ ಡಯೋಗ್ನೆಟಿಕ್ ಸೆಂಟರ್ ನಟಿಗೆ 1.5 ಲಕ್ಷ ರೂಪಾಯಿ ಪರಿಹಾರಧನ ನೀಡುವಂತೆ ಆದೇಶಿಸಿದೆ. ಆದರೆ ನಟಿ ತಮ್ಮ ಹೆಸರನ್ನು ಸಾರ್ವಜನಿಕವಾಗಿ ರಿವೀಲ್ ಮಾಡಿಲ್ಲ ಎಂದು ವರದಿ ತಿಳಿಸಿದೆ.