ಲಖನೌ: ಉತ್ತರ ಪ್ರದೇಶದ ಲಖಿಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ವಿಶೇಷ ತನಿಖಾ ತಂಡವು (ಎಸ್ಐಟಿ) ಆರು ಮಂದಿ ಶಂಕಿತ ಆರೋಪಿಗಳ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 3ರಂದು ರೈತರ ಮೇಲೆ ಎಸ್ಯುವಿ ಹರಿದು ನಾಲ್ಕು ಮಂದಿ ಸಾವಿಗೀಡಾಗಿದ್ದರು. ಬೆಂಕಿ ಹೊತ್ತಿಸಲಾದ ಅದೇ ಎಸ್ ಯುವಿಯ ಬಳಿ ನಿಂತಿರುವ ಆರು ಜನರ ಚಿತ್ರ ಈಗ ಬಹಿರಂಗವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವವರ ವಿವರ ಬಹಿರಂಗ ಪಡಿಸುವುದಿಲ್ಲ ಹಾಗೂ ಮಾಹಿತಿದಾರರಿಗೆ ಸೂಕ್ತ ಬಹುಮಾನ ನೀಡಲಾಗುತ್ತದೆ ಎಂದು ಎಸ್ಐಟಿ ಹೇಳಿದೆ.
ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಸಾವಿಗೆ ಕಾರಣವಾದ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಸರ್ಕಾರವು ಎಸ್ಐಟಿ ರೂಪಿಸಿದೆ. ಬಿಜೆಪಿ ಕಾರ್ಯಕರ್ತರನ್ನು ಥಳಿಸಿರುವ ಘಟನೆಗೆ ಸಂಬಂಧಿಸಿದ ಹಲವು ಚಿತ್ರಗಳು ಹಾಗೂ ವಿಡಿಯೊಗಳನ್ನು ಎಸ್ಐಟಿ ಸಂಗ್ರಹಿಸಿದ್ದು, ಬಿಡುಗಡೆ ಮಾಡಿರುವ ಫೋಟೊದಲ್ಲಿ ಕಾಣುವ ಶಂಕಿತರನ್ನು ಗುರುತಿಸುವಂತೆ ಜನರಿಗೆ ಮನವಿ ಮಾಡಿದೆ.
ಬಿಜೆಪಿ ಕಾರ್ಯತರನ್ನು ಥಳಿಸಿದ ಘಟನೆಯ ಕುರಿತು ವಿಚಾರಣೆಗಾಗಿ ಎಸ್ಐಟಿ ಈಗಾಗಲೇ ಸುಮಾರು ಮೂವತ್ತಕ್ಕೂ ಹೆಚ್ಚು ರೈತರಿಗೆ ನೋಟಿಸ್ ನೀಡಿದೆ.
ಲಖಿಂಪುರ ಖೇರಿ ಪ್ರಕರಣವನ್ನು ಸುಪ್ರೀಂಕೋರ್ಟ್ ಇಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಈ ಘಟನೆಯಲ್ಲಿ ನಾಲ್ವರು ಕೃಷಿಕರು, ವಾಹನ ಚಾಲಕ ಮತ್ತು ಇಬ್ಬರು ಬಿಜೆಪಿ ಕಾರ್ಯಕರ್ತರು, ಸ್ಥಳೀಯ ಪತ್ರಕರ್ತ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದರು.