ನ್ಯೂಸ್ ನಾಟೌಟ್: ಶಿವಮೊಗ್ಗ ಟ್ರಾಯಲ್ ಬ್ಲಾಸ್ಟ್ ಮತ್ತು ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಚಾರ್ಜ್ಶೀಟ್ ಸಲ್ಲಿಸಿದ್ದು, ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಶಿವಮೊಗ್ಗ ಟ್ರಾಯಲ್ ಬ್ಲಾಸ್ಟ್ ಮತ್ತು ಮಂಗಳೂರು ಕುಕ್ಕರ್ ಬ್ಲಾಸ್ಟ್ ಐಸಿಸ್ ಸಂಚು ಎನ್ನುವ ಆತಂಕಕಾರಿ ವಿಚಾರವನ್ನು ವಿಚಾರಣೆ ಸಂದರ್ಭ ಶಂಕಿತ ಉಗ್ರರು ಬಾಯ್ಬಿಟ್ಟಿದ್ದಾರೆ. ಶಿವಮೊಗ್ಗ ಟ್ರಾಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಮಾಝ್ ಮುನಿರ್ ಮತ್ತು ಮೊಹಮ್ಮದ್ ಶಾರಿಕ್ ಸೇರಿದಂತೆ 9 ಜನರ ವಿರುದ್ಧ NIA ಅಧಿಕಾರಿಗಳು ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಮೊಹಮ್ಮದ್ ಶಾರಿಕ್ (25), ಮಾಜ್ ಮುನೀರ್ ಅಹ್ಮದ್ (23), ಸೈಯದ್ ಯಾಸಿನ್ (22), ರೀಶಾನ್ ತಾಜುದ್ದೀನ್ ಶೇಖ್ (22), ಹುಜೈರ್ ಫರ್ಹಾನ್ ಬೇಗ್ (22), ಮಜಿನ್ ಅಬ್ದುಲ್ ರಹಮಾನ್ (22), ನದೀಮ್ ಅಹ್ಮದ್ ಎಂದು ಗುರುತಿಸಲಾಗಿದೆ. ಕೆ ಎ (22), ಜಬೀವುಲ್ಲಾ (32) ಮತ್ತು ನದೀಮ್ ಫೈಝಲ್ ಎನ್ (27) ಬಂಧಿತರಲ್ಲಿ ಐವರು ಮೆಕಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಇವರೆಲ್ಲ ರಾಜ್ಯದಲ್ಲಿ ರೋಬೋಟ್ಗಳ ಮೂಲಕ ವಿಧ್ವಂಸಕ ಕೃತ್ಯ ಎಸಗಲು ಐಸಿಸ್ ಸಂಚು ರೂಪಿಸಿತ್ತು. ಶಂಕಿತ ಉಗ್ರರಿಗೆ ರೋಬೋಟಿಕ್ ಕೋರ್ಸ್ ಓದುವಂತೆ ಐಸೀಸ್ ಹ್ಯಾಂಡ್ಲರ್ ನಿರ್ದೇಶನ ನೀಡುತ್ತಿದ್ದ. ಅಲ್ಲದೇ ಭವಿಷ್ಯದ ಭಯೋತ್ಪಾದಕ ಚಟುವಟಿಕೆಗಳಿಗೆ ತಯಾರಾಗುವಂತೆ ತಿಳಿಸಿದ್ದ ಎನ್ನುವ ವಿಚಾರವನ್ನು ಶಂಕಿತ ಉಗ್ರರು ಬಾಯ್ಬಿಟ್ಟಿದ್ದಾರೆ. ಬಂಧಿತರು ವಿದೇಶದಲ್ಲಿರುವ ಐಸಿಸ್ ಭಯೋತ್ಪಾದಕರೊಂದಿಗೆ ನೇರ ಸಂಪರ್ಕದಲ್ಲಿದ್ದರು ಎನ್ನುವ ವಿಷಯವನ್ನು NIA ಅಧಿಕಾರಿಗಳು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.