ನ್ಯೂಸ್ ನಾಟೌಟ್ : ಪುತ್ತೂರು ಮೂಲದ ತಹಶೀಲ್ದಾರ್ ಅಜಿತ್ ಕುಮಾರ್ ರೈ ಬಂಧನದ ಬೆನ್ನಲ್ಲೇ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಪ್ರಕರಣದಲ್ಲಿ ಕೆ.ಆರ್. ಪುರ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅಜಿತ್ ಅವರ ಬಳಿ ಭಾರಿ ಪ್ರಮಾಣದ ಬೇನಾಮಿ ಆಸ್ತಿಗಳನ್ನು ಹೊಂದಿರುವ ದಾಖಲೆಗಳು ಪತ್ತೆಯಾಗಿದ್ದವು.ಅಜಿತ್ ರೈಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 40 ಲಕ್ಷ ನಗದು, 700 ಗ್ರಾಂ ಚಿನ್ನ, 1.90 ಕೋಟಿ ಮೌಲ್ಯದ ವಸ್ತುಗಳು, ಐಷಾರಾಮಿ ಕಾರು ಮತ್ತು ಬೈಕ್ಗಳನ್ನು ವಶಕ್ಕೆ ಪಡೆದಿದ್ದರು.
4 ಥಾರ್ ಕಾರ್, 4 ಫಾರ್ಚೂನರ್ ಕಾರ್, 3 ರಾಯಲ್ ಎನ್ಫೀಲ್ಡ್, 1 ಲ್ಯಾಂಡ್ ಕ್ರೂಸರ್ (2.5 ಕೋಟಿ ಮೌಲ್ಯ) ಹೊಂದಿದ್ದು, ಎಲ್ಲ ಕಾರಿಗೂ ಒಂದೇ ನಂಬರ್ ರಿಜಿಸ್ಟರ್ ಇದೆ ಎಂದು ಹೇಳಲಾಗಿತ್ತು. ಆದರೆ ಇದ್ಯಾವುದಕ್ಕೂ ಅಜಿತ್ ರೈ ಲೆಕ್ಕ ಕೊಡುತ್ತಿಲ್ಲವೆಂದು ವರದಿಯಾಗಿತ್ತು.
ಅನುಕಂಪದ ಆಧಾರದಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸ ಪಡೆದುಕೊಂಡಿದ್ದ ಅಜಿತ್ ರೈ ನಂತರ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಬಡ್ತಿ ಪಡೆದಿದ್ದರು. ಪ್ರಸ್ತುತ ಕೆ.ಆರ್. ಪುರಂನಲ್ಲಿ ತಹಶೀಲ್ದಾರ್ (KR Puram Tahsildar) ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದಾಯಕ್ಕಿಂತ 69% ಹೆಚ್ಚುವರಿ ಆಸ್ತಿ ಹೊಂದಿರುವ ಆರೋಪದಲ್ಲಿ ಅಜಿತ್ ರೈ ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.