ನ್ಯೂಸ್ ನಾಟೌಟ್ :ಇತ್ತೀಚೆಗಷ್ಟೆ ಬರೋಬ್ಬರಿ 971 ಕೋಟಿ ರೂ. ವೆಚ್ಚದಲ್ಲಿ ಭವ್ಯ ನೂತನ ಸಂಸತ್ ಭವನ ನಿರ್ಮಾಣವಾಗಿ ಲೋಕಾರ್ಪಣೆ ಗೊಂಡಿತ್ತು.ಇದೀಗ ಇನ್ನೊಂದು ವಿಶೇಷತೆಯನ್ನೊಳಗೊಂಡು ಇದು ಇನ್ನೂ ಹತ್ತಿರವಾಗಲಿದೆ.ಹೌದು,ಇಲ್ಲಿಯವರೆಗೆ ಸಂಸತ್ ಸದಸ್ಯರು ಸದನದಲ್ಲಿ ನಡೆಯುವ ಚರ್ಚೆಗಳನ್ನು ಹಿಂದಿ ,ಇಂಗ್ಲೀಷ್ ನಲ್ಲಿಯೇ ಕೇಳಬೇಕಾಗಿತ್ತು.ಆದರೆ ಇನ್ನು ಮುಂದೆ ಕನ್ನಡ ಸೇರಿದಂತೆ ತಮ್ಮ ತಮ್ಮ ಪ್ರಾದೇಶಿಕ ಭಾಷೆಗಳಲ್ಲೇ ಆಲಿಸಬಹುದಾಗಿದೆ!.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಸ್ತಾಪಿಸಿರುವ ಈ ಪರಿಕಲ್ಪನೆ ಅನುಷ್ಠಾನಗೊಂಡರೆ ಹೊಸ ಸಂಸತ್ ಭವನದಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಭಾರತೀಯ ಭಾಷೆಗಳ ಉತ್ತೇಜನದ ಜೊತೆಗೆ ಇದು ಸಂಸದರಿಗೂ ಅನುಕೂಲವಾಗಲಿದೆ.ಸಂವಿಧಾನದ 8ನೇ ಪರಿಚ್ಛೇದದಲ್ಲಿ ಬರುವ ಎಲ್ಲ 22 ಭಾಷೆಗಳಲ್ಲೂ ತತ್ಕ್ಷಣದಲ್ಲೇ ದ್ವಿಮುಖ ವ್ಯಾಖ್ಯಾನ ಸೌಲಭ್ಯ(ಏಕಕಾಲಕ್ಕೆ ಭಾಷಾಂತರ ಪ್ರಕ್ರಿಯೆ)ವನ್ನು ಕಲ್ಪಿಸುವ ಕುರಿತು ಜೂ.28ರಂದು ಲೋಕಸಭಾ ಕಾರ್ಯಾಲಯವು ಸುತ್ತೋಲೆಯೊಂದನ್ನು ಹೊರಡಿಸಿದ್ದು,ಆರಂಭದಲ್ಲಿಯೇ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಇದನ್ನು ಪರೀಕ್ಷಿಸುವಂತೆ ಉದ್ಯೋಗಿಗಳಿಗೆ ಆಹ್ವಾನವನ್ನೂ ನೀಡಿದೆ ಅನ್ನೋದು ವಿಶೇಷ.
ಈ ಸೌಲಭ್ಯವು ಎಲ್ಲರಿಗೂ ಪ್ರಯೋಜನವಾಗಲಿದೆ.ಮಾತ್ರವಲ್ಲ ಪ್ರಸ್ತುತ ಇರುವ ವ್ಯವಸ್ಥೆಯ ಪ್ರಕಾರ, ಯಾವುದೇ ಸದಸ್ಯ ಹಿಂದಿ ಅಥವಾ ಇಂಗ್ಲಿಷ್ ಹೊರತಾದ ಭಾಷೆಯಲ್ಲಿ ಮಾತನಾಡಲು ಬಯಸಿದರೆ, ಅವರು ಮುಂಚಿತವಾಗಿಯೇ ಈ ಕುರಿತು ಸಭಾಧ್ಯಕ್ಷರಿಂಗೆ ನೋಟಿಸ್ ನೀಡಬೇಕಾಗಿತ್ತು. ಅದರಂತೆ, ಕಾರ್ಯಾಲಯವು ಆ ಸದಸ್ಯನಿಗೆ ಸೂಕ್ತ ಭಾಷಾಂತರಕಾರನನ್ನು ನಿಯೋಜಿಸುತ್ತಿತ್ತು.ವಿಶೇಷವೆಂದರೆ ಬಜೆಟ್ ಮಂಡನೆ,ವಿಧೇಯಕಗಳ ಕುರಿತು ಚರ್ಚೆ ಅಥವಾ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆ ಮುಂತಾದ ಪ್ರಮುಖ ಕಲಾಪಗಳನ್ನು ಭಾಷಾಂತರಕಾರರು ಆ ಕ್ಷಣದಲ್ಲೇ ಎಲ್ಲ 22 ಭಾಷೆಗಳಿಗೂ ಭಾಷಾಂತರಿಸಲಿದ್ದು,ಒಂದು ವೇಳೆ ಎಲ್ಲವೂ ಅಂದು ಕೊಂಡಂತೆ ಆದರೆ ತುಂಬಾ ಪ್ರಯೋಜನವಾಗಲಿದೆ.