ನ್ಯೂಸ್ ನಾಟೌಟ್ : ಶಕ್ತಿ ಯೋಜನೆ ಜಾರಿಯಾದಾಗಿನಿಂದ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಎದುರಾಗುತ್ತಲೇ ಇದೆ.ನಾನಾ ತರಹದ ಸುದ್ದಿಗಳನ್ನು ನಾವು ಓದಿದ್ದೇವೆ.ಆದರೆ ಇದೊಂದು ವರದಿ ಅದೆಲ್ಲಕ್ಕಿಂತಲೂ ವಿಭಿನ್ನವಾಗಿದೆ.ಹೌದು,ಇಷ್ಟು ದಿನ ಮಹಿಳೆಯರು ಫ್ರೀ ಬಸ್ ಅಂತ ಖುಷಿಯಲ್ಲಿ ತೇಲಾಡುತ್ತಾ ಓಡಾಡುತ್ತಿದ್ದರು.ಇದೀಗ ಇಲ್ಲೊಬ್ಬರು ಮಹಿಳೆ ನಮಗೆ ಫ್ರೀ ಪ್ರಯಾಣ ಬೇಡ,ನಾವು ಹಣ ಕೊಟ್ಟೆ ಪ್ರಯಾಣ ಮಾಡ್ತೀವಿ ಅಂತ ಟಿಕೆಟ್ ತೆಗೆದುಕೊಂಡ ಘಟನೆ ವರದಿಯಾಗಿದೆ.
ಚಾಮರಾಜನಗರ (Chamarajanagar) ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮಹಿಳೆಯರು ಚೌಡಹಳ್ಳಿಯಿಂದ ಗುಂಡ್ಲುಪೇಟೆಗೆ ಹಣ ನೀಡಿ ಟಿಕೆಟ್ ಕೇಳಿದ್ದಾರೆ. ಈ ವೇಳೆ ನಿಮಗೆ ಉಚಿತ ಪ್ರಯಾಣದ ಅವಕಾಶವಿದೆ ಹಣ ಕೊಡಬೇಕಿಲ್ಲ ಎಂದರೂ ಮಹಿಳೆಯರು ಕೇಳಲಿಲ್ಲ. ಕೊನೆಗೆ ಮಹಿಳೆಯರ ಒತ್ತಾಯಕ್ಕೆ ಮಣಿದು ನಿರ್ವಾಹಕ ಹಣ ಪಡೆದು ಟಿಕೆಟ್ ನೀಡಿದ್ದಾರೆ.ಸದ್ಯ ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
ಹಳ್ಳಿ ಮಹಿಳೆಯರಂತೆ ಕಾಣುವ ಇವರು ನಮ್ಮ ರಾಜ್ಯದ ಬಗ್ಗೆ ಮಾತಾಡಿದ್ದಿಷ್ಟು “ನಾವು ಉಚಿತ ಪಯಣ ಮಾಡಿದರೆ ಸರ್ಕಾರದ ಆರ್ಥಿಕತೆಗೆ ಪೆಟ್ಟು ಬೀಳುತ್ತೆ.ಹೀಗಾಗಿ ನಮಗೆ ಉಚಿತ ಪ್ರಯಾಣ ಬೇಡ. ಹಣ ಕೊಡುತ್ತೇವೆ ಟಿಕೆಟ್ ಕೊಡಿ” ಎಂದು ಮಹಿಳೆಯರು ಹೇಳಿದ್ದಾರೆ ಎಂದು ಕಂಡಕ್ಟರ್ ಫೇಸ್ ಬುಕ್ನಲ್ಲಿ (Facebook) ಬರೆದುಕೊಂಡಿದ್ದಾರೆ. ಕಂಡಕ್ಟರ್ ಮಹೇಶ್ ಪೋಸ್ಟ್ ಗೆ ಇದೀಗ ಸಾಕಷ್ಟು ಕಾಮೆಂಟ್ಗಳು ಬರುತ್ತಿದೆ.ಕೆಲವರು ಈ ಮಹಿಳೆಯರಿಗೆ ರಾಜ್ಯದ ಬಗೆಗಿರುವ ಕಾಳಜಿಗೆ ನಮ್ಮ ನಮನಗಳು ಎಂದು ಹೇಳಿದ್ದಾರೆ.
ಫ್ರೀ ಬಸ್ ಬಂದ ಬಳಿಕ ಪುರುಷರ ಬಗೆಗಿನ ಕಾಮಿಡಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದವು.ಪತ್ನಿ ಪ್ರವಾಸಕ್ಕೆ ಹೊರಟು ಪತಿ ಮನೆಯಲ್ಲಿ ಅಡುಗೆ ಮಾಡುವ ಪೋಸ್ಟ್ ವೈರಲ್ ಆಗಿತ್ತು. ಇದೀಗ ಅದರ ಬೆನ್ನಲ್ಲೆ ನಿನ್ನೆಯಷ್ಟೆ ಹೊಸಕೋಟೆಯಲ್ಲಿ ಪತಿಮಹಾಶಯನೊಬ್ಬ ಬಸ್ ನ ಟಯರ್ ನಡಿಗೆ ತಲೆಯಿಟ್ಟು ದಯವಿಟ್ಟು ಶಕ್ತಿ ಯೋಜನೆಯನ್ನು ರದ್ದುಗೊಳಿಸಿ ಎಂದು ಹೇಳಿದ ಸುದ್ದಿ ಹರಿದಾಡಿತ್ತು. ನನ್ನ ಪತ್ನಿ ಟ್ರಿಪ್ಗೆ ಅಂತ ಹೋದವಳು ಇನ್ನೂ ಮನೆಗೆ ವಾಪಾಪ್ ಬಂದಿಲ್ಲ. ಸಿದ್ದರಾಮಯ್ಯನವರೇ ಇದು ಸರಿಯಲ್ಲ ಎಂದು ಗೋಗರೆಯುತ್ತಾ ಬಸ್ ಚಕ್ರದಡಿ ತಲೆಯಿಟ್ಟು ರಾದ್ದಾಂತ ಮಾಡಿದ್ದ.ಇದೀಗ ಮಹಿಳೆಯರು ಟಿಕೆಟ್ ಕೊಟ್ಟು ಪ್ರಯಾಣ ಮಾಡುತ್ತಿರುವುದು ರಾಜ್ಯದ ಹಿತದೃಷ್ಟಿಯಿಂದ ಉತ್ತಮವಾದ ಕೆಲಸವೆಂದು ಜನ ಆಡಿಕೊಳ್ಳುತ್ತಿದ್ದಾರೆ.