ನ್ಯೂಸ್ ನಾಟೌಟ್: ಇತ್ತೀಚೆಗಷ್ಟೆ ಮಂಗಳೂರಿನಲ್ಲಿ ಹಾವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ವಸ್ತುವಿರುವುದು ಗಮನಕ್ಕೆ ಬಂದು ನರಳಾಡುತ್ತಿದ್ದ ಹಾವಿಗೆ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಕೊಂಡೊಯ್ಯುದು ಕೆಲವು ಗಂಟೆಗಳ ಶಸ್ತ್ರ ಚಿಕಿತ್ಸೆ ಬಳಿಕ ಹೊಟ್ಟೆಯೊಳಗಿದ್ದ ಸುಣ್ಣದ ಪ್ಲಾಸ್ಟಿಕ್ ಡಬ್ಬವನ್ನು ಯಶಸ್ವಿಯಾಗಿ ಹೊರತೆಗೆದು ರಕ್ಷಿಸಿದ ಘಟನೆ ನ್ಯೂಸ್ ನಾಟೌಟ್ ನಲ್ಲಿ ವರದಿಯಾಗಿತ್ತು.
ಈಗ ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ರಸ್ತೆಯ ಬಳಿ ಬುಧವಾರ ಮಧ್ಯಾಹ್ನದ ವೇಳೆಗೆ ನಾಗರ ಹಾವೊಂದು ದ್ವಿಚಕ್ರ ವಾಹನದ ಚಕ್ರಕ್ಕೆ ಸಿಲುಕಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದುದ್ದನ್ನು ಕಂಡ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಚಿಕಿತ್ಸೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.
ತಕ್ಷಣ ಸ್ಪಂದಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾವನ್ನು ಚಿಕಿತ್ಸೆಗಾಗಿ ಉಡುಪಿಯ ವನ್ಯಜೀವಿ ಪಶುವೈದ್ಯ ಡಾ. ಯಶಸ್ವಿಯವರ ಖಾಸಗೀ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿರುತ್ತಾರೆ.
ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು ಇದೀಗ ಹಾವು ಚೇತರಿಸಿಕೊಂಡಿದೆ ಎಮದು ವರದಿ ತಿಳಿಸಿದೆ. ವಲಯಾರಣ್ಯಾಧಿಕಾರಿ ಹೇಮಗಿರಿ ಅಂಗಡಿ ಅವರ ಮಾರ್ಗದರ್ಶನದಲ್ಲಿ ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಮತ್ತು ಶಂಕರ್ ಅವರು ಆಸ್ಪತ್ರೆಗೆ ದಾಖಲಿಸಿದ್ದರು.