ನ್ಯೂಸ್ ನಾಟೌಟ್ : ಬಾಲಕಿ ಮೇಲೆ ಕೋತಿಯೊಂದು ದಾಳಿ (Monkey Attack) ಮಾಡಿರುವ ಘಟನೆ ನಡೆದಿದೆ. ಪರಿಣಾಮ 2ನೇ ತರಗತಿಯಲ್ಲಿ ಓದುತ್ತಿರುವ ಇಕರಾ ಗಡಕಾರಿ ಎಂಬ ಬಾಲಕಿ ಗಂಭೀರ ಗಾಯಗೊಂಡಿದ್ದಾಳೆಂದು ತಿಳಿದು ಬಂದಿದೆ.
ಧಾರವಾಡ ಜಿಲ್ಲೆಯ ಗರಗ ಗ್ರಾಮದ ಸರ್ಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆ ಎದುರು ಈ ದುರ್ಘಟನೆ ಸಂಭವಿಸಿದ್ದು,ಇಕರಾ ಗಡಕಾರಿ ಕೋತಿಯಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾಳೆ.ಆದರೂ ಅದ್ಯಾಕೋ ಏನೋ ಕೋತಿ ಮತ್ತೆ ಮತ್ತೆ ಬೆನ್ನಟ್ಟಿ ಬರುತ್ತಲೆ ಇತ್ತು. ಈ ವೇಳೆ ಅಟ್ಟಾಡಿಸಿಕೊಂಡು ಹೋದ ಕೋತಿ ಮಗುವಿನ ಕಾಲಿಗೆ ಕಚ್ಚಿದೆ. ಮಗುವಿನ ಎಡಗಾಲು ಹಿಡಿದು ಎಳೆದಾಡಿದೆ. ಬಾಲಕಿಯ ಎಡಗಾಲಿಗೆ ಗಂಭೀರ ಗಾಯವಾಗಿದ್ದು, ದಾಳಿ ಮಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕಿ ಕಿರುಚಾಡುತ್ತಿದ್ದಂತೆ ಕೆಲ ಸ್ಥಳೀಯರು ಓಡಿ ಬಂದಾಗ ಕೋತಿ ಅಲ್ಲಿಂದ ಕಾಲ್ಕಿತ್ತಿದೆ.
ಗಾಯಾಳು ಬಾಲಕಿಯನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.ತೀವ್ರ ಗಾಯಗೊಂಡ ಹಿನ್ನೆಲೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗರಗ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇಲ್ಲಿ ಕೋತಿ ಉಪಟಳ ಜೋರಾಗಿದ್ದು, ಮಕ್ಕಳು ಶಾಲೆಗೆ ಬರಲು ಹೆದರುತ್ತಿದ್ದಾರೆ.ಹೀಗಾಗಿ ದಾಳಿ ಮಾಡಿದ ಕೋತಿಯನ್ನು ಕೂಡಲೇ ಸೆರೆಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.