ನ್ಯೂಸ್ ನಾಟೌಟ್ : ಶಕ್ತಿ ಯೋಜನೆ ಜಾರಿಯಾದ ಬಳಿಕ ಅಟೋ ಚಾಲಕರು ಹಾಗೂ ಖಾಸಗಿ ಬಸ್ ನವರು ನಷ್ಟ ಅನುಭವಿಸಿದ್ದನ್ನು ಕೇಳಿದ್ದೇವೆ.ಇಡೀ ದಿನದಲ್ಲಿ 40 ರೂ.ವನ್ನು ಗಳಿಸಿ ಮನೆಗೆ ತೆರಳುವ ವಿಡಿಯೋವೊಂದು ಭಾರಿ ವೈರಲ್ ಆಗಿದೆ.ವಿಡಿಯೋದಲ್ಲಿ ಚಾಲಕನಿಗೆ ಮಾತನಾಡುತ್ತಿರುವಾಗಲೇ ದುಖಃ ಉಮ್ಮಳಿಸಿ ಬಂದಿದ್ದು, ಕಣ್ಣೀರು ಹಾಕಿದ್ದಾರೆ.ಈ ವಿಡಿಯೋ ನೋಡಿದಾಗ ಎಂಥವರ ಮನಸ್ಸಾದರೂ ಒಂದು ಕ್ಷಣ ಕರಗದಿರದು!.
ಸ್ಥಳೀಯ ವಾಹಿನಿಯೊಂದಿಗೆ ಮಾತನಾಡಿದ ಆಟೋ ಚಾಲಕ, ಬೆಳಿಗ್ಗೆಯಿಂದ ಸಂಪಾದಿಸಿದ ಹಣವನ್ನು ತೋರಿಸುತ್ತಾರೆ. ಈ ಟ್ವೀಟ್ ಪ್ರಕಾರ, ಚಾಲಕನು ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಕೇವಲ ₹ 40 ಗಳಿಸಲು ಸಾಧ್ಯವಾಗಿದೆ ಹಾಗೂ ಆತ ಓಡಿಸುತ್ತಿರುವ ಆಟೋಗೆ ದಿನವೊಂದಕ್ಕೆ 200 ರೂ. ಕಟ್ಟ ಬೇಕು. ಮನೆ ಬಾಡಿಗೆ,ಮಕ್ಕಳ ಫೀಸ್ ಸೇರಿದಂತೆ ಇತರ ಖರ್ಚುಗಳು ಇದ್ದು ಜೀವನ ನಡೆಸೋದೆ ಕಷ್ಟ ಸಾಧ್ಯವಾಗಿದೆ ಎಂದು ಕಣ್ಣೀರಿಟ್ಟ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಇದು ಟ್ವಿಟರ್ ಅಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದ್ದು ಕೆಲವು ಬಳಕೆದಾರರು ಕಷ್ಟಪಟ್ಟು ದುಡಿಯುವ ವ್ಯಕ್ತಿಯ ಬಗ್ಗೆ ಸಹಾನುಭೂತಿ ತೋರಿಸಿದ್ದಾರೆ. ಇನ್ನೂ ಕೆಲವರು ನಗರದ ಆಟೋರಿಕ್ಷಾ ಚಾಲಕರು ಆಗಾಗ್ಗೆ ಹೆಚ್ಚಿನ ಶುಲ್ಕ ವಿಧಿಸಿ ಜೇಬುಗಳನ್ನು ತುಂಬಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.1 ನಿಮಿಷದ ಈ ಕ್ಲಿಪ್ ಟ್ವಿಟರ್ನಲ್ಲಿ ಸಾಕಷ್ಟು ಜನರನ್ನು ಸೆಳೆದಿದ್ದು ವಿಭಜಿತ ಚಿಂತನೆಗಳು ಕಾಮೆಂಟ್ ವಿಭಾಗದಲ್ಲಿ ಕಂಡುಬರುತ್ತಿದೆ.
ಆದರೆ ಕಳೆದ ವಾರ ಜಯದೇವದಿಂದ ಮಲ್ಲೇಶ್ವರಂಗೆ ಹೋಗಲು ಯಾವುದೇ ಆಟೋ ಚಾಲಕ ಸಿದ್ಧರಿರಲಿಲ್ಲ. ಒಬ್ಬ ವ್ಯಕ್ತಿ ದುಪ್ಪಟ್ಟು ಶುಲ್ಕ ಕೊಡುತ್ತೇನೆ ಎಂದರೂ ಕೇಳಲಿಲ್ಲ! ಎಲ್ಲರೂ ಏನೂ ಮಾಡದೆ ಪಾರ್ಕಿಂಗ್ ಮಾಡಿದರು. ಕಡೆಗೆ ಬಸ್ ಹತ್ತಿದೆ. ಇವರ ಬಗ್ಗೆ ಯಾವುದೇ ಕರುಣೆ ಇಲ್ಲ. ಉಬರ್ ಓಲಾ ಕೂಡ ಲೂಟಿಕೋರರು” ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ಐಟಿ ನಗರ ಬೆಂಗಳೂರಿನಿಂದ ಇಂತಹ ನೂರಾರು ಕಥೆಗಳು ಕೇಳಿ ಬರುತ್ತವೆ.ಆದರೆ ಆಟೋ ಚಾಲಕರು ಎಲ್ಲರೂ ಒಂದೇ ರೀತಿ ಇರಲ್ಲ ಅನ್ನುವುದನ್ನು ನಾವಿಲ್ಲಿ ಗಮನಿಸಬೇಕಾಗುತ್ತದೆ.ಕೆಲವರು ಪ್ರಾಮಾಣಿಕವಾಗಿ ಕೆಲಸ ಮಾಡುವವರು ಇದ್ದಾರೆ.ಅಂಥವರಿಗೆ ಬಾಡಿಗೆ ಆಗದೆ ದಿನದಲ್ಲಿ ೪೦ ರೂ. ಸಂಪಾದನೆಯಾದರೆ ಬೆಂಗಳೂರಿನಂತಹ ಮಹಾನಗರದಲ್ಲಿ ಬದುಕುವುದನ್ನು ಊಹಿಸಿಕೊಳ್ಳುವುದು ಕೂಡ ಕಷ್ಟ.ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಸಿ.ಎಂ.ಸಿದ್ದರಾಮಯ್ಯರವರು ಅಟೋ ಚಾಲಕರ ನೋವಿಗೂ ಶೀಘ್ರ ಸ್ಪಂದಿಸುವಂತಾಗಲಿ..