ನ್ಯೂಸ್ ನಾಟೌಟ್: ಟೈಟಾನಿಕ್ ನೋಡಲು ತೆರಳಿದ್ದ ಸಬ್ಮೆರಿನ್ ದುರಂತ ನಡೆದು ಒಂದೇ ವಾರದಲ್ಲಿ ನೆಟ್ಫ್ಲಿಕ್ಸ್ ಟೈಟಾನಿಕ್ ಸಿನಿಮಾವನ್ನು ರಿಲೀಸ್ ಮಾಡಲು ನಿರ್ಧರಿಸಿದ್ದು ನೆಟ್ಟಿಗರಿಂದ ತೀವ್ರ ಟೀಕೆ ಗುರಿಯಾಗಿದೆ. ದುರಂತ ನಡೆದಿರುವ ಸಮಯದಲ್ಲೂ ಸಿನಿಮಾ ರಿಲೀಸ್ ಮಾಡಿ ದುಡ್ಡು ಮಾಡುವ ಯೋಚನೆಯಲ್ಲಿದ್ದೀರಾ ಎಂದು ನೆಟ್ಟಿಗರು ನೆಟ್ಫ್ಲಿಕ್ಸ್ಗೆ ತೀವ್ರ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
5 ಜನರ ಸಾವಿಗೆ ಕಾರಣವಾದ ಟೈಟಾನಿಕ್ ನೋಡಲು ಹೋದ ಸಬ್ಮೆರಿನ್ ದುರಂತದ ಬಗ್ಗೆ ಜನರು ಸಂತಾಪ ವ್ಯಕ್ತಪಡಿಸಿದ್ದಾರೆ. ಆದರೆ ಟೈಟಾನಿಕ್ ಸಬ್ಮೆರಿನ್ ದುರಂತ ವಿಚಾರ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದೆ.
ಈ ಸಂದರ್ಭದಲ್ಲಿ ಟೈಟಾನಿಕ್ ಕುರಿತು ಕುತೂಹಲ ಹೆಚ್ಚಾಗಿದ್ದು ಎಲ್ಲರೂ ಈ ಕುರಿತು ಗೂಗಲ್ ಮಾಡುತ್ತಿದ್ದರು. ಟೈಟಾನಿಕ್ ಎನ್ನುವ ಶಬ್ದವೇ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದು ಇದೇ ಸಂದರ್ಭದಲ್ಲಿ ನೆಟ್ಫ್ಲಿಕ್ಸ್ ಜೃಮ್ಸ್ ಕ್ಯಾಮರೂನ್ ಅವರ ಟೈಟಾನಿಕ್ ಸಿನಿಮಾ ರೀ-ರಿಲೀಸ್ಗೆ ಮುಂದಾಗಿದೆ.
ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನೆಟ್ಫ್ಲಿಕ್ಸ್ಗೆ ಟೈಟಾನಿಕ್ ಬರುತ್ತಿದೆ. ಆದರೆ ಇದೇನೂ ದೊಡ್ಡ ಖುಷಿಯ ಸಂಗತಿಯಲ್ಲ ಎಂದಿದ್ದಾರೆ.
ಜೇಮ್ಸ್ ಕ್ಯಾಮೆರೂನ್ ನಿರ್ದೇಶನದ ಅವರ ಟೈಟಾನಿಕ್ ಸಿನಿಮಾ 1997ರಲ್ಲಿ ರಿಲೀಸ್ ಆಗಿತ್ತು. ಇದರಲ್ಲಿ ಲೆನಾರ್ಡೋ ಡಿ ಕಾರ್ಪಿಯೋ, ಕೇಟ್ ವಿನ್ಸ್ಲೆಟ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಈ ಸಿನಿಮಾ ಬ್ಲಾಕ್ಬಸ್ಟರ್ ಆಗಿತ್ತು.
ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಹೋಗಿದ್ದ ಜಲಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿತ್ತು. ಅಮೆರಿಕಾದ ಕಾವಲು ಪಡೆಯ ಮಾಹಿತಿ ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದು, ನಾಪತ್ತೆಯಾಗಿರುವ ಜಲಂತರ್ಗಾಮಿ ನೌಕೆಯನ್ನು ಪತ್ತೆ ಹಚ್ಚಲು ಶೋಧ ಕಾರ್ಯ ನಡೆಸಲಾಗಿತ್ತು.
ಅತ್ಯಂತ ದೊಡ್ಡ ವೈಭವದ ಟೈಟಾನಿಕ್ ಹಡಗು ಸಮುದ್ರದಲ್ಲಿ ಮುಳುಗಲ್ಲ ಎಂದು ಹೇಳಲಾಗಿತ್ತು. ಆದರೆ 1912ರಲ್ಲಿ ತನ್ನ ಚೊಚ್ಚಲ ಯಾನದಲ್ಲೇ ಮುಳುಗಿತ್ತು. ಈ ವೇಳೆ 1500ಕ್ಕೂ ಹೆಚ್ಚು ಜನರು ದುರಂತದಲ್ಲಿ ಮೃತಪಟ್ಟಿದ್ದರು.
ಬಳಿಕ ಎಷ್ಟೇ ಹುಡುಕಾಡಿದರೂ ಟೈಟಾನಿಕ್ ಹಡಗಿನ ಅವಶೇಷಗಳು ಎಲ್ಲೂ ಕಂಡು ಬಂದಿರಲಿಲ್ಲ. ನಂತರ ಅಟ್ಲಾಂಟಿಕ್ ಸಾಗರದ ಕೆಳಭಾಗದ ಆಳದಲ್ಲಿ 1985ರಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳನ್ನು ಕಂಡುಹಿಡಿಯಲಾಗಿತ್ತು. ಇದು ಆ ಬಳಿಕ ಸಮುದ್ರದಾಳದ ಅಪರೂಪದ ಐತಿಹಾಸಿಕ ಕುರುಹಾಗಿ ನೋಡಲಾಗಿತ್ತು. ಆದರೆ ಇತ್ತೀಚೆಗೆ ಅದನ್ನು ನೋಡಲು ಕೋಟಿಗಟ್ಟಲೆ ಖರ್ಚುಮಾಡಿ ತೆರಳಿದ್ದ ಕೋಟ್ಯಾಧಿಪತಿಗಳು ದುರಂತ ಅಂತ್ಯ ಕಂಡಿದ್ದರು, ಈಗ ಅದರ ಲಾಭವನ್ನು ನೆಟ್ ಫ್ಲಿಕ್ಸ್ ಪಡೆಯಲು ಬಯಸುತ್ತಿದೆ ಎನ್ನುವುದು ಜನರ ಟೀಕೆ.