ನ್ಯೂಸ್ ನಾಟೌಟ್ : ವೃದ್ಧೆಯೊಬ್ಬಳು ತನ್ನ ಮೊಮ್ಮಗನ ಮೃತದೇಹದೊಂದಿಗೆ 10 ದಿನಗಳ ಕಾಲ ವಾಸ ಮಾಡಿದ್ದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ಮೊಮ್ಮಗನನ್ನು ಪ್ರಿಯಾಂಶು(17) ಎಂದು ಗುರುತಿಸಲಾಗಿದೆ.
ಪ್ರಿಯಾಂಶು ತಂದೆ-ತಾಯಿಯನ್ನು ಕಳೆದುಕೊಂಡು ಕಳೆದ ಕೆಲ ವರ್ಷಗಳಿಂದ ಅಜ್ಜಿಯೊಂದಿಗೆ ವಾಸಿಸುತ್ತಿದ್ದ.ಕಳೆದ ಎರಡು ದಿನಗಳಿಂದ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಅಕ್ಕಪಕ್ಕದವರು ಗುರುತಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ವೃದ್ಧೆಯ ಮನೆ ಪರಿಶೀಲನೆ ನಡೆಸಿದ್ದಾರೆ.ಈ ವೇಳೆ ಬಾಲಕನ ಕೊಳೆತ ಶವ ಪತ್ತೆಯಾಗಿದೆ.ಪೊಲೀಸರು ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ವೃದ್ದೆಯ ಪತಿ ಸರ್ಕಾರಿ ನೌಕರನಾಗಿದ್ದು,ಕೆಲ ವರ್ಷಗಳ ಹಿಂದೆ ಆತ ಮೃತಪಟ್ಟಿದ್ದ.ವೃದ್ಧೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳು ಮತ್ತು ಆಕೆಯ ಪತಿ ಆರು ವರ್ಷಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು.ಇವರ ಮಗನೇ ಪ್ರಿಯಾಂಶು, ಈತ ಕಳೆದ ಕೆಲವು ವರ್ಷಗಳಿಂದ ಅಜ್ಜಿಯೊಂದಿಗೆ ವಾಸಿಸುತ್ತಿದ್ದ ಎಂದು ತಿಳಿದು ಬಂದಿದೆ.ಇನ್ನು, ಕಿರಿಯ ಮಗಳು ಲಖೀಂಪುರ ಖೇರಿಯಲ್ಲಿ ವಾಸಿಸುತ್ತಿದ್ದು, ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೃದ್ದೆಯ ಪತಿ ಸರ್ಕಾರಿ ನೌಕರನಾಗಿರುವುದರಿಂದ ಅವರು ಮೃತ ಪಟ್ಟ ನಂತರ ಆತನ ಪಿಂಚಣಿಯಿಂದ ಬರುತ್ತಿದ್ದ ಹಣ ಆಕೆ ಹಾಗೂ ಮೊಮ್ಮಗನ ಜೀವನಕ್ಕೆ ಆಧಾರವಾಗಿತ್ತು.ಆದರೆ ಮೊಮ್ಮಗ ಯಾವ ಕಾರಣದಿಂದ ಸಾವನ್ನಪ್ಪಿದ ಎನ್ನುವ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಘಟನೆ ಕುರಿತು ಮಾತನಾಡಿದ ಪೊಲೀಸರು, ಮಹಿಳೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದಾರೆ.ಆಕೆ ಪ್ರತಿದಿನ ತನ್ನ ಮೊಮ್ಮಗನ ದೇಹವನ್ನು ತೊಳೆದು ಅವನ ಮೃತದೇಹದ ಬಟ್ಟೆಗಳನ್ನು ಬದಲಾಯಿಸುತ್ತಿದ್ದಳು. ಆತನ ಸಾವಿನ ಬಗ್ಗೆ ಕೇಳಿದಾಗ, ಹತ್ತು ದಿನಗಳ ಹಿಂದೆ ಪ್ರಿಯಾಂಶು ಸಾವನ್ನಪ್ಪಿದ್ದಾನೆ ಎಂದು ವೃದ್ಧೆ ಹೇಳಿದ್ದಾಳೆ ಎಂದು ತಿಳಿಸಿದ್ದಾರೆ.