ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚುತ್ತಿವೆ. ಹೆಣ್ಣಿನ ಮಾಯಾಜಾಲವನ್ನು ಬಳಸಿಕೊಂಡು ಮೊಬೈಲ್ ಮೂಲಕವೂ ಹನಿಟ್ರ್ಯಾಪ್ ನಡೆಸಿದ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಈ ನಡುವೆ ಅಂತಹುದೇ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಕಡಬದಿಂದ ವರದಿಯಾಗಿದೆ. ನೌಕರಿ ಕೊಟ್ಟು ಜೀವನಕ್ಕೊಂದು ದಾರಿ ಮಾಡಿಕೊಟ್ಟ ಮಾಲೀಕನನ್ನೇ ಕೆಲಸದಾಳು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿದ್ದಾರೆ. ಈ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಮೂಲತಃ ಕಡಬ ತಾಲೂಕಿನ ಹೊಸ್ಮಠ ನಿವಾಸಿ, ಕೃಷಿಕರೋರ್ವರು ಜೂನ್ 14 ರಂದು ತನ್ನ ಕಾರಿನಲ್ಲಿ ಚಾಲಕನ ಜೊತೆಗೆ ಮಂಗಳೂರಿನಿಂದ ಹೊಸ್ಮಠದ ತನ್ನ ಮನೆಗೆ ಬಂದಿದ್ದಾರೆ. ಹಾಗೆ ಬಂದವರು ಮಧ್ಯಾಹ್ನದ ವೇಳೆಗೆ ತೋಟಕ್ಕೆ ತೆರಳಲು ಸಿದ್ಧರಾಗಿದ್ದಾರೆ. ಈ ಸಮಯದಲ್ಲಿ ಅಪರಿಚಿತ ಮುಸ್ಲಿಂ ಯುವತಿಯೋರ್ವಳು ಓರ್ವ ಯುವಕನೊಂದಿಗೆ ದ್ವಿಚಕ್ರ ವಾಹನದಲ್ಲಿ ಇವರ ಮನೆಗೆ ಆಗಮಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಕಾರು ಚಾಲಕ ಆರೋಪಿ ಫೈಸಲ್ ಎಂಬಾತ ಅಪರಿಚಿತರ ಜೊತೆಗೆ ಶಾಮೀಲಾಗಿ ತನ್ನ ಮಾಲೀಕರನ್ನು ಅಪರಿಚಿತ ಯುವತಿಯ ಜೊತೆಗೆ ಬಲವಂತವಾಗಿ ಕುಳ್ಳಿರಿಸಿ ಫೋಟೋ ತೆಗೆದಿದ್ದಾನೆ. ನಂತರ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇರಿಸಿದ್ದಾನೆ ಎಂದು ಹೇಳಲಾಗಿದೆ.
ಮಾಲೀಕರು ಹಣ ನೀಡಲು ನಿರಾಕರಿಸಿದ ವೇಳೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಹಣ ನೀಡದೇ ಇದ್ದುದರಿಂದ ಮಾಲೀಕರ ಕಾರಿನ ಕೀಯನ್ನು ಎಳೆದುಕೊಂಡು ಹೋಗಿ ಕಾರನ್ನು ಕೊಂಡು ಹೋಗಿದ್ದಾನೆ ಎನ್ನಲಾಗಿದೆ.ಘಟನೆ ನಡೆದು ಹಲವು ದಿನಗಳ ನಂತರ ಮಾಲೀಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ 59/2023 ಕಲಂ: 384.506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಡಬ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.