ನ್ಯೂಸ್ ನಾಟೌಟ್: 2024 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮಹಾಮೈತ್ರಿ ಮಾಡಿಕೊಂಡು ಚುನಾವಣೆಗಿಳಿಯಲು ಭರ್ಜರಿ ಪ್ಲಾನ್ ರೂಪಿಸಿಕೊಂಡಿದ್ದ ವಿಪಕ್ಷಗಳು ಇದೀಗ ಮೈತ್ರಿಗೂ ಮುನ್ನವೇ ಕಚ್ಚಾಟ ಶುರು ಮಾಡಿಕೊಂಡಿದ್ದಾರೆ.
ಮೈತ್ರಿ ಕೂಟ ಕಟ್ಟುವ ಉದ್ದೇಶದಿಂದ ಮೂರು ದಿನಗಳ ಹಿಂದೆ ಪಾಟ್ನಾದಲ್ಲಿ ವಿಪಕ್ಷಗಳು ಸಭೆ ನಡೆಸಿದ್ದವು. ಆದರೆ ಈ ಸಭೆ ನಡೆದು ಮೂರೇ ದಿನದಲ್ಲಿ ಕಾಂಗ್ರೆಸ್ , ಟಿಎಂಸಿ, ಸಿಪಿಎಂ ಪರಸ್ಪರ ಕಚ್ಚಾಟ ನಡೆಸಿಕೊಂಡಿದೆ. ಒಂದಾಗಬೇಕಿದ್ದ ಈ ಮೂರು ಪಕ್ಷಗಳು ತಮ್ಮ ಹಿತದೃಷ್ಟಿ ಇಟ್ಟುಕೊಂಡು ಎದುರಾಳಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಈಗಲೇ ಹೀಗೆ ಕಚ್ಚಾಡಿಕೊಂಡರೆ ಇನ್ನು ಕೇವಲ ೧೦ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ವಿಪಕ್ಷಗಳು ಅದೆಷ್ಟರ ಮಟ್ಟಿಗೆ ಒಗ್ಗಟ್ಟು ಪ್ರದರ್ಶಿಸಬಹುದು ಅನ್ನುವ ಅನುಮಾನಗಳನ್ನು ಹುಟ್ಟಿಸಿದೆ.
ಸೋಮವಾರ ದೆಹಲಿಯಲ್ಲಿ ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ. ಸುಧಾಕರನ್ ಭೇಟಿ ಮಾಡಿದ್ದ ರಾಹುಲ್ ಗಾಂಧಿ ನಾವು ಬೆದರಿಕೆ ಅಥವಾ ದ್ವೇಷದ ರಾಜಕೀಯಕ್ಕೆ ಬೆದರುವುದಿಲ್ಲ ಎಂದು ಆಡಳಿತಾರೂಢ ಸಿಪಿಎಂಗೆ ನೇರ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದು ಕಡೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ, ಮಹಾಮೈತ್ರಿ ಮಾಡುವ ವಿಚಾರದಲ್ಲಿ ತಮ್ಮ ಭಾರಿ ಯತ್ನಕ್ಕೆ ರಾಜ್ಯದಲ್ಲಿ ಕೆಲವು ಒಳಮೈತ್ರಿ ಅಡ್ಡಿ ಮಾಡಿದೆ. ಇದನ್ನು ತಾವು ಬಯಲಿಗೆಳೆಯುವುದಾಗಿ ತಿಳಿಸಿದ್ದಾರೆ.
ಮತ್ತೊಂದು ಕಡೆ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಗಾಳದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಮೂಲಕ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಮತ್ತೊಂದು ಕಡೆ ಕೇಜ್ರಿವಾಲ್ ಕೂಡ ಮೈತ್ರಿ ಒಡೆಯುವ ಕುತಂತ್ರ ನಡೆಸಿದ್ದಾರೆಂದು ಕಾಂಗ್ರೆಸ್ ನಾಯಕ ಅಜೆಯ್ ಮಾಕೆನ್ ತಿಳಿಸಿದ್ದಾರೆ.
ಇವೆಲ್ಲವೂ ವಿಪಕ್ಷಗಳ ಅಧಿಕಾರ ಹಿಡಿಯುವ ಕನಸಿಗೆ ದೊಡ್ಡ ತೊಡಕಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಯಾವ ದಾರಿಯಲ್ಲಿ ಸಾಗಬಹುದು ಅನ್ನುವುದು ಕುತೂಹಲಕ್ಕೆ ಕಾರಣವಾಗಿದೆ.