ನ್ಯೂಸ್ ನಾಟೌಟ್ : ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಉಚಿತ ಪ್ರಯಾಣ ಹಿನ್ನೆಲೆ ಮಹಿಳೆಯರು ಪುಣ್ಯ ಕ್ಷೇತ್ರಗಳಿಗೆ ತೆರಳುತ್ತಿರುವುದರ ನಡುವೆ ಹಲವು ಕಡೆ ನೂಕು ನುಗ್ಗಲು ಮತ್ತು ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ಅನೇಕ ಅವಾಂತರಗಳು ನಡೆದಿವೆ. ಬಸ್ನಲ್ಲಿ ಆಸನಕ್ಕಾಗಿ ಮಹಿಳೆಯರು ಹೊಡೆದಾಡಿಕೊಳ್ಳುತ್ತಿರುವ ಪ್ರಕರಣಗಳು ವರದಿ ಆಗಿವೆ.
ಇಂತಹದ್ದೇ ಘಟನೆಗಳಲ್ಲಿ ಒಂದಾದ ಕೊಪ್ಪಳ ಜಿಲ್ಲೆಯಲ್ಲಿ ಬಸ್ ಮೇಲೆ ಕಲ್ಲು ತೂರಿದ್ದ ಮಹಿಳೆಗೆ ಐದು ಸಾವಿರ ರೂಪಾಯಿ ದಂಡ ಹಾಕಲಾಗಿದೆ. ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್ಗೆ ಮಹಿಳೆ ಕಲ್ಲೆಸೆದಿದ್ದಾಳೆ ಎನ್ನಲಾಗಿದ್ದು,
ಕಲ್ಲು ಎಸೆದ ಹಿನ್ನೆಲೆ ಪ್ಯಾಸೆಂಜರ್ ಸಮೇತ ಬಸ್ನ್ನು ಚಾಲಕ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಗೆ ತಂದಿದ್ದಾರೆ. ಬಸ್ ಪೊಲೀಸ್ ಠಾಣೆಗೆ ತಂದು ಚಾಲಕ ಮುತ್ತಪ್ಪ ದೂರು ನೀಡಲು ಮುಂದಾಗಿದ್ದರು. ಇಲಕಲ್ ಬಳಿಯ ಪಾಪನಳ್ಳಿ ನಿವಾಸಿ ಲಕ್ಷ್ಮಿ ಕಲ್ಲು ಎಸೆದ ಮಹಿಳೆ. ಬಸ್ ನಿಲ್ಲಿಸದ ಕೋಪಕ್ಕೆ ಕಲ್ಲು ಎಸೆದಿರೋದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.
ಪಾಪನಳ್ಳಿ ನಿವಾಸಿಯಾಗಿರುವ ಮಹಿಳೆ ಕೊಪ್ಪಳದ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದಳು. ದೇವಿಯ ದರ್ಶನ ಪಡೆದು ಊರಿಗೆ ತೆರಳಲು ಮಹಿಳೆ ಬಸ್ಗಾಗಿ ಕಾಯುತ್ತಿದ್ದಳು. ಸುಮಾರು ಮೂರು ಗಂಟೆ ಬಸ್ಗಾಗಿ ಮಹಿಳೆ ಕಾಯುತ್ತಿದ್ದಳು ಎನ್ನಲಾಗಿದೆ.
ಮಳೆಯ ನಡುವೆಯೇ ಕಾದಿದ್ದ ಮಹಿಳೆ ಕೋಪಗೊಂಡು KA-35, F-252 ಬಸ್ ಮೇಲೆ ಕಲ್ಲು ಎಸೆದಿದ್ದಾಳೆ. ಕಲ್ಲೆಸೆತದ ಪರಿಣಾಮ ಬಸ್ ಗ್ಲಾಸ್ ಒಡೆದಿದೆ. ಬಸ್ಗೆ ಹಾನಿ ಆಗಿರೋದರಿಂದ 5 ಸಾವಿರ ದಂಡ ಪಾವತಿಸಿ, ಇಲ್ಲವಾದ್ರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸೋದಾಗಿ ಡಿಪೋ ಮ್ಯಾನೇಜರ್ ಹೇಳಿದ್ದಾರೆ. ಕೊನೆಗೆ ತಪ್ಪೊಪ್ಪಿಕೊಂಡ ಮಹಿಳೆ 5 ಸಾವಿರ ರೂಪಾಯಿ ದಂಡ ಪಾವತಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.