ನ್ಯೂಸ್ ನಾಟೌಟ್: ರಾಜ್ಯ ಸರ್ಕಾರ ಉಚಿತ ವಿದ್ಯುತ್ ಘೋಷಣೆ ಮಾಡಿದೆ. ಈ ಬೆನ್ನಲ್ಲೇ ಸರತಿ ಸಾಲಿನಲ್ಲಿ ಜನ ನಿಂತುಕೊಂಡು ಗೃಹ ಜ್ಯೋತಿ ಅರ್ಜಿ ಸಲ್ಲಿಸುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ವಿಪರೀತ ವಿದ್ಯುತ್ ಬಿಲ್ ಬಂದು ಜನ ಹೈರಾಣಾಗಿದ್ದಾರೆ. ಈ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಈ ರಗಳೆಯಲ್ಲಿರುವ ಜನರಿಗೆ ಇನ್ನೊಂದು ಹೊಸ ಶಾಕ್ ಎದುರಾಗಿದೆ.
ಹೌದು, ರಾಜ್ಯದಲ್ಲಿ ದುಬಾರಿ ಕರೆಂಟ್ ಬಿಲ್ ಜನರನ್ನು ಶಾಕ್ಗೆ ಒಳಗಾಗಿಸಿದೆ. ಡಬಲ್ ರೇಟ್ನ ಬಿಲ್ ನೋಡಿ ಹೇಗಪ್ಪಾ ಕಟ್ಟೋದು ಅನ್ನುವ ಚಿಂತೆಯಲ್ಲಿದ್ದಾರೆ. ಈ ಕರೆಂಟ್ ಶಾಕ್ನ ಬೆನ್ನಲ್ಲೇ ಇದೀಗ ದೇಶದ ವಿದ್ಯುತ್ ದರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗ್ತಿದ ಅನ್ನುವ ಸ್ಪೋಟಕ ವಿಚಾರ ಹೊರಬಿದ್ದಿದೆ. ಈ ಪ್ರಕಾರವಾಗಿ ವಿದ್ಯುತ್ ಬಿಲ್ನಲ್ಲಿ ಇನ್ಮುಂದೆ ವೆತ್ಯಯವಾಗಲಿದೆ. ಹಗಲಿಗೊಂದು ವಿದ್ಯುತ್ ದರ, ರಾತ್ರಿಗೊಂದು ಕರೆಂಟ್ ರೇಟ್ ಅನ್ನು ಫಿಕ್ಸ್ ಮಾಡಲು ಕೇಂದ್ರ ಸರ್ಕಾರ ಮೆಗಾ ಪ್ಲಾನ್ ಮಾಡಿದೆ. ದೇಶದ ವಿದ್ಯುತ್ ದರ ವ್ಯವಸ್ಥೆಯಲ್ಲಿ ಎರಡು ಮಹತ್ವದ ಬದಲಾವಣೆ ಮಾಡಲಾಗ್ತಿದೆ. ದೇಶಾದ್ಯಂತ ಟೈಮ್ ಆಫ್ ಡೇ ದರ ವ್ಯವಸ್ಥೆ ಜಾರಿಗೆ ತರಲಾಗ್ತಿದ್ದು, ಇನ್ಮುಂದೆ ದಿನಪೂರ್ತಿ ಒಂದೇ ವಿದ್ಯುತ್ ದರ ಇರಲ್ಲ. ಅಂದ್ರೆ ಹಗಲಿಗೊಂದು ವಿದ್ಯುತ್ ದರ, ಸಂಜೆಯಿಂದ ನಾಳೆ ಬೆಳಗಾಗುವರೆಗೂ ಮತ್ತೊಂದು ದರ ನಿಗಧಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ.
ದಿನದ ಸಮಯದ ಆಧಾರದ ಮೇಲೆ ವಿದ್ಯುತ್ ದರ ನಿಗದಿ ಮಾಡಲಾಗ್ತಿದೆ. ಅಂದರೆ ಬೆಳಗ್ಗೆಯಿಂದ ಸಂಜೆಯವರೆಗೆ ಸಾಮಾನ್ಯ ದರಕ್ಕಿಂತ ಶೇಕಡಾ 10-20 ರಷ್ಟು ಕಡಿಮೆ ದರ ನಿಗದಿಯಾಗಲಿದೆ. ಪೀಕ್ ಸಮಯದಲ್ಲಿ ಅಂದ್ರೆ ಸಂಜೆಯ ಬಳಿಕ ಶೇಕಡಾ 10 ರಿಂದ 20 ರಷ್ಟು ಹೆಚ್ಚಿನ ದರ ನಿಗದಿಯಾಗಲಿದೆ. ಬೆಳಗ್ಗೆಯಿಂದ ಸಂಜೆವರೆಗೂ ಸೋಲಾರ್ ವಿದ್ಯುತ್ ಉತ್ಪಾದನೆಗೆ ಅವಕಾಶ ಇರುತ್ತದೆ. ಹೀಗಾಗಿ ಸೋಲಾರ್ ವಿದ್ಯುತ್ ಉತ್ಪಾದನೆಯ ಅವಧಿಯಲ್ಲಿ ಕಡಿಮೆ ವಿದ್ಯುತ್ ದರ ನಿಗದಿ ಮಾಡಲಾಗ್ತಿದೆ. ನಾನ್ ಸೋಲಾರ್ ವಿದ್ಯುತ್ ಉತ್ಪಾದನೆ ಅವಧಿ ಅಂದ್ರೆ ಕತ್ತಲಾಗುತ್ತಿದ್ದಂತೆ ಥರ್ಮಲ್, ಹೈಡ್ರೋ ಪವರ್ನಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತೆ.
ಹೀಗಾಗಿ ಹಗಲಿಗೊಂದು ವಿದ್ಯುತ್ ದರ, ಸಂಜೆಯಿಂದ ನಾಳೆ ಬೆಳಗಾಗುವರೆಗೂ ಮತ್ತೊಂದು ದರ ನಿಗಧಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹೊಸ ವಿದ್ಯುತ್ ದರ ವ್ಯವಸ್ಥೆಯು ಗ್ರಾಹಕರು ಹಾಗೂ ವಿದ್ಯುತ್ ವ್ಯವಸ್ಥೆ ಇಬ್ಬರಿಗೂ ಅನುಕೂಲವಾಗಲಿದೆ. ವಿದ್ಯುತ್ ದರ ವ್ಯವಸ್ಥೆಯಲ್ಲಿ ತಂದಿರುವ ಈ ಕ್ರಾಂತಿಕಾರಕ ಬದಲಾವಣೆ ಈಗಲೇ ಜಾರಿಗೆ ಬರುತ್ತಿಲ್ಲ. ಕೇಂದ್ರದ ಇಂಧನ ಖಾತೆ ಸಚಿವ ಆರ್.ಕೆ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 2024ರ ಏಪ್ರಿಲ್ 1ರಿಂದ ಹೊಸ ದರ ವ್ಯವಸ್ಥೆ ಜಾರಿಯಾಗ್ತಿದೆ. ಕಮರ್ಷಿಯಲ್, ಕೈಗಾರಿಕಾ ವಿದ್ಯುತ್ ಬಳಕೆದಾರರಿಗೆ 2024 ರ ಏಪ್ರಿಲ್ 1ರಿಂದ ಜಾರಿಯಾಗ್ತಿದೆ. ಗೃಹ ವಿದ್ಯುತ್ ಬಳಕೆದಾರರಿಗೆ ಏಪ್ರಿಲ್ 1, 2025 ರಿಂದ ಹೊಸ ದರ ಜಾರಿ ಆಗುತ್ತಿದೆ. ಸ್ಮಾರ್ಟ್ ಮೀಟರ್ ಆಳವಡಿಸಿಕೊಂಡವರಿಗೆ ತಕ್ಷಣದಿಂದಲೇ ಜಾರಿ ಆಗಲಿದೆ.