ನ್ಯೂಸ್ ನಾಟೌಟ್ : ಹಿಂದೂ ಮುಖಂಡ ಅರುಣ್ ಪುತ್ತಿಲ ಗುರುವಾರ ತಡರಾತ್ರಿ ಮುಸ್ಲಿಂ ವ್ಯಕ್ತಿಯ ಕಾರನ್ನು ಚರಂಡಿಯಿಂದ ಮೇಲಕ್ಕೆತ್ತಲು ನೆರವಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಿಂದೂ ನಾಯಕರೆಂದರೆ ಮುಸ್ಲಿಂ ಧರ್ಮದ ವಿರೋಧಿಗಳು ಅನ್ನುವಂತಹ ವಾತಾವರಣ ಸಮಾಜದಲ್ಲಿರುವಾಗ ಅರುಣ್ ಪುತ್ತಿಲ ಅವರ ಈ ನಡೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಸೂರಿಕುಮೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚರಂಡಿಗೆ ರಾತ್ರಿ ಅನ್ಯ ಧರ್ಮದವರ ಕಾರೊಂದು ಬಿದ್ದಿದೆ. ಈ ವೇಳೆ ಅದೇ ಮಾರ್ಗವಾಗಿ ಮಂಗಳೂರಿನಿಂದ ತುರ್ತು ಕಾರ್ಯಕ್ರಮಕ್ಕೆ ಪುತ್ತೂರಿಗೆ ಪುತ್ತಿಲರು ಆಗಮಿಸುತ್ತಿದ್ದರು. ತಡ ರಾತ್ರಿ 10.45 ಕ್ಕೆ ಕಾರೊಂದು ಚರಂಡಿಗೆ ಬಿದ್ದಿದ್ದನ್ನು ಅರುಣ್ ಪುತ್ತಿಲ ಗಮನಿಸಿದ್ದಾರೆ. ತಕ್ಷಣ ಕಾರನ್ನು ನಿಲ್ಲಿಸಿ ತನ್ನ ಕಾರಲ್ಲಿದ್ದ ಆಪ್ತರೊಂದಿಗೆ ಸೇರಿ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದಾರೆ.
ಅರುಣ್ ಪುತ್ತಿಲ ಮುಂಬರುವ ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿ ಎಂದೇ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಪುತ್ತಿಲ ಅವರು ಬಿಜೆಪಿಗೆ ಸೆಡ್ಡು ಹೊಡೆದು ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಗೆಲುವಿನ ಭಾರಿ ನಿರೀಕ್ಷೆ ಮೂಡಿಸಿದ್ದರೂ ಅಲ್ಪ ಮತಗಳ ಅಂತರದಿಂದ ಕಾಂಗ್ರೆಸ್ನ ಅಭ್ಯರ್ಥಿ ಅಶೋಕ್ ರೈ ವಿರುದ್ಧ ಸೋಲು ಅನುಭವಿಸಿದ್ದರು. ಆ ಸೋಲಿನ ಬಳಿಕ ಅರುಣ್ ಪುತ್ತಿಲ ಅವರು ಮುಂಬರುವ ಲೋಕಸಭಾ ಚುನಾವಣೆಗೆ ನಿಲ್ಲಬೇಕು ಅನ್ನುವ ಒತ್ತಡವನ್ನು ಅವರ ಅಭಿಮಾನಿಗಳು ಹಾಕಿದ್ದಾರೆ. ಇದೆಲ್ಲದೆ ನಡುವೆ ಅರುಣ್ ಪುತ್ತಿಲ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಾರೋ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೋ ಅನ್ನುವುದನ್ನು ಕಾದು ನೋಡಬೇಕಿದೆ.