ನ್ಯೂಸ್ ನಾಟೌಟ್: ಓಷನ್ಗೇಟ್ ಎಕ್ಸ್ಪೆಡಿಶನ್ಸ್ ಕಂಪನಿಗೆ ಸೇರಿದ ಜಲಂತರ್ಗಾಮಿ ಸಬ್ಮೆರಿನ್ನಲ್ಲಿ ಐವರು ಶ್ರೀಮಂತ ಪ್ರವಾಸಿಗರು ಟೈಟಾನಿಕ್ ಹಡಗಿನ ಅವಶೇಷ ನೋಡಲು ತೆರಳಿದ್ದರು. ನಾಲ್ಕು ದಿನಗಳ ಆಮ್ಲಜನಕದ ಪೂರೈಕೆಯೊಂದಿಗೆ ನೀರಿನೊಳಗೆ ಧುಮುಕುವ ಈ ಸಬ್ಮರ್ಸಿಬಲ್, ಅವಶೇಷ ನೋಡಲು ತೆರಳಿದ್ದ ಮರುದಿನವೇ ಸಂಪರ್ಕ ಕಳೆದುಕೊಂಡಿತ್ತು. ಇದೀಗ ಆ ಜಲಂತರ್ಗಾಮಿಯಲ್ಲಿ ಆಮ್ಲಜನಕವೂ ಖಾಲಿಯಾಗಿದ್ದು, ಹೀಗಾಗಿ ಸಬ್ಮೆರಿನ್ನಲ್ಲಿದ್ದ ಎಲ್ಲರೂ ಮೃತಪಟ್ಟಿರುತ್ತಾರೆ ಎಂದು ಮಾಲಕತ್ವ ಕಂಪನಿಯಾದ ಓಶಿಯನ್ ಗೇಟ್ ಪ್ರಕಟಣೆಯಲ್ಲಿ ತಿಳಿಸಿದೆ.
“ಕಂಪನಿಯ ಕಾರ್ಯನಿರ್ವಹಣಾಧಿಕಾರಿ ಸ್ಟಾಕ್ಟನ್ ರಶ್, ಶಹ್ಝಾದಾ ದಾವೂದ್ ಮತ್ತು ಅವರ ಪುತ್ರ ಸುಲೇಮಾನ್ ದಾವೂದ್, ಹಮೀಶ್ ಹಾರ್ಡಿಂಗ್ ಹಾಗೂ ಪೌಲ್ ಹೆನ್ರಿ ನರ್ಗಿಯೊಲೇಟ್ ದುರ್ಮರಣ ಹೊಂದಿದ್ದಾರೆ ಎಂದು ನಾವೀಗ ಭಾವಿಸಿದ್ದೇವೆ” ಎಂದು ಕಂಪನಿ ಹೇಳಿದೆ.
“ಅವರು ಅತ್ಯದ್ಭುತ ಸಾಹಸಮಯ ಸ್ಫೂರ್ತಿ ಹಾಗೂ ಆವಿಷ್ಕಾರ ಮತ್ತು ಜಗತ್ತಿನ ಕಡಲ ರಕ್ಷಣೆಯ ಬಗ್ಗೆ ಆಳವಾದ ವ್ಯಾಮೋಹ ಹೊಂದಿದವರಾಗಿದ್ದರು. ನಮ್ಮ ಹೃದಯಗಳು ಈ ದುರಂತಮಯ ಸಂದರ್ಭದಲ್ಲಿ ಈ ಐದು ಆತ್ಮಗಳು ಹಾಗೂ ಅವರ ಕುಟುಂಬಗಳ ಸದಸ್ಯರೊಂದಿಗೆ ಇದೆ. ನಾವು ಅವರ ಜೀವ ನಷ್ಟಕ್ಕೆ ಹಾಗೂ ಅವರನ್ನು ಬಲ್ಲವರೆಲ್ಲರಿಗೂ ಸಂತಾಪ ವ್ಯಕ್ತಪಡಿಸುತ್ತೇವೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಇದಕ್ಕೂ ಮುನ್ನ, ಸಾಗರದ ತಳದಲ್ಲಿ ಟೈಟಾನಿಕ್ ಇರುವ ಪ್ರದೇಶದಲ್ಲಿ ಅವಶೇಷಗಳು ಪತ್ತೆಯಾಗಿದ್ದು, ಜಲಾಂತರ್ಗಾಮಿ ನೌಕೆಗೆ ಅತ್ಯಗತ್ಯವಾಗಿದ್ದ 96 ಗಂಟೆಗಳ ಉಸಿರಾಟದ ಗಾಳಿ ಖಾಲಿಯಾಗಿರುವ ಸಾಧ್ಯತೆ ಇದೆ. ಸಾಗರ ತಳದಲ್ಲಿ ದೂರನಿಯಂತ್ರಿತ ರೊಬೊಟ್ ಕಾರ್ಯಾಚರಣೆ ನಡೆಸುವ ಮೂಲಕ ಅವಶೇಷಗಳನ್ನು ಪತ್ತೆ ಹಚ್ಚಲಾಗಿದ್ದು, ಅದನ್ನು ಮೌಲ್ಯಮಾಪನ ಮಾಡಬೇಕಿದೆ ಎಂದು ಅಮೆರಿಕಾ ಕೋಸ್ಟ್ ಗಾರ್ಡ್ ಹೇಳಿದೆ ಎನ್ನಲಾಗಿದೆ.
ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ರವಿವಾರ ಬೆಳಗ್ಗೆ ಪ್ರಯಾಣ ಬೆಳೆಸಿದ್ದ ಟೈಟಾನ್ ಜಲಾಂತರ್ಗಾಮಿ ನೌಕೆಯಲ್ಲಿ ಸುಮಾರು ನಾಲ್ಕು ದಿನಗಳಿಗಾಗುವಷ್ಟು ಉಸಿರಾಟದ ಗಾಳಿ ಲಭ್ಯವಿರಲಿದೆ ಎಂದು ಅಂದಾಜಿಸಲಾಗಿತ್ತು. ಅದರ ಕೊನೆಯ ಸಂಪರ್ಕದ ನಂತರ ರಕ್ಷಣಾ ಪಡೆಗಳು ನಾಪತ್ತೆಯಾದ ಸ್ಥಳಕ್ಕೆ ಹಡಗು, ವಿಮಾನ ಹಾಗೂ ಇನ್ನಿತರ ಸಾಧನಗಳನ್ನು ಕ್ಷಿಪ್ರವಾಗಿ ಸಾಗಿಸಿದ್ದವು. ಸಾಗರ ತಳ ತಲುಪುವ ಕೆನಡಾ ಹಡಗಿನ ರೊಬೋ ಈಗಾಗಲೇ ಸಾಗರ ತಳ ತಲುಪಿದೆ ಎಂದು ಅಮೆರಿಕಾ ಕೋಸ್ಟ್ ಗಾರ್ಡ್ ಹೇಳಿದ್ದರೆ, ಕ್ಯಾಮೆರಾ, ಬೆಳಕು ಹಾಗೂ ಕೈಗಳನ್ನು ಹೊಂದಿರುವ ಆಳ ಈಜುಗಾರಿಕೆ ನಡೆಸುವ ರೊಬೊಟ್ ಈ ರಕ್ಷಣಾ ಕಾರ್ಯಾಚರಣೆಯೊಂದಿಗೆ ಪಾಲ್ಗೊಂಡಿದೆ ಎಂದು ಫ್ರೆಂಚ್ ಸಂಶೋಧನಾ ಸಂಸ್ಥೆ ತಿಳಿಸಿದೆ ಎನ್ನಲಾಗಿದೆ. ಇದರ ಜೊತೆಗೆ ಈ ನಿಗೂಢ ಅನಾಹುತದ ಬಗ್ಗೆ ಸಂಸ್ಥೆ ತನಿಖೆಗೆ ಆದೇಶಿಸಿದ್ದು, ನಿಜಾಂಶ ಶೀಘ್ರದಲ್ಲೆ ಬಯಲಾಗಲಿದೆ ಎಂದಿದೆ.