ನ್ಯೂಸ್ ನಾಟೌಟ್: ‘ಬಡವರಿಗೆ ಅಕ್ಕಿ ಕೊಡಬಾರದು ಎಂದು ಹೇಳುವ ನೀಚ ಬುದ್ಧಿ ರಾಜ್ಯ ಬಿಜೆಪಿ ನಾಯಕರಿಗಿಲ್ಲ. ಇವರ ಹಾಗೆ ನೀಚ ರಾಜಕಾರಣ ಮಾಡಿ ಬಡವರ ಹೊಟ್ಟೆಗೆ ಹೊಡೆಯುವುದಿಲ್ಲ. ದೇಶದಲ್ಲಿ ಆಹಾರ ಭದ್ರತೆಗಾಗಿ ರಾಜ್ಯಗಳಿಗೆ ಅಕ್ಕಿ ಮಾರಾಟ ಮಾಡದಿರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿದೆ’ ಎಂದು ಸಂಸದ ಡಿ.ವಿ.ಸದಾನಂದ ಗೌಡ ಹೇಳಿದರು.
ಕೇಂದ್ರ ಸರ್ಕಾರ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ನೀಡುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಅವರು,, ‘ಅಕ್ಕಿ ಮಾರಾಟ ಮಾಡಬಾರದು ಎಂಬ ನಿರ್ಧಾರ ಕೇವಲ ಕರ್ನಾಟಕಕ್ಕೆ ಮಾತ್ರ ಮಾಡಿದ್ದಲ್ಲ. ಇಲ್ಲಿ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬರುವುದಕ್ಕೂ ಮೊದಲು ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರ, 13 ಬಜೆಟ್ ಕೊಟ್ಟ ಕೂಡಲೇ ಗದ್ದೆಯಲ್ಲಿ ಭತ್ತ ಬೆಳೆದು ಅಕ್ಕಿ ಕೊಡುವುದಕ್ಕೆ ಆಗುವುದಿಲ್ಲ. ಕುಣಿಯಲಾರದವನು ನೆಲಡೊಂಕು ಅಂದನಂತೆ ಎಂಬ ಗಾದೆಯಂತೆ ಈಗ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅಕ್ಕಿ ಕೊಡುತ್ತೇನೆ ಎಂದು ಹೇಳುವಾಗ ಇವರಿಗೆ ಪರಿಜ್ಞಾನ ಇರಲಿಲ್ಲವೇ? ‘ನನಗೂ, ನಿಮಗೂ, ನಮ್ಮ ಮನೆಯವರಿಗೂ, ನಿಮ್ಮ ಮನೆಯವರಿಗೂ ಅಕ್ಕಿ ಕೊಡುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ ಅವರ ಟವಲ್ ಹೆಗಲಿನಿಂದ ಎಲ್ಲಿ ಹೋಯಿತು? ಏನಾದರೂ ಆಗಲಿ, ಕೊಡುತ್ತೇನೆ ಎಂದು ಹೇಳಿದ್ದರು. ಮುಖ್ಯಮಂತ್ರಿಯಾಗುವವರಿಗೆ ಮುಂದಾಲೋಚನೆ ಇರಬೇಕು’ ಎಂದು ಹಿಗ್ಗಾಮುಗ್ಗ ಟೀಕಿಸಿದರು.
ಬಿಜೆಪಿ ಕಾಂಗ್ರೆಸ್ ನಾಯಕರ ಹೊಂದಾಣಿಕೆ ರಾಜಕಾರಣದ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು ‘ನಮ್ಮ ಪಕ್ಷ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಮಾಡಿಕೊಂಡಿದ್ದರೆ ಖಂಡಿತವಾಗಿಯೂ ಬಹುಮತ ಪಡೆಯುತ್ತಿದ್ದೆವು. ಹೊಂದಾಣಿಕೆ ರಾಜಕಾರಣ ಮಾಡದಿರುವುದರಿಂದ ಹಿನ್ನಡೆಯಾಗಿದೆ ಎಂದರು. ‘ಗೆಲ್ಲುವ ನಿರೀಕ್ಷೆ ಇದ್ದ ಕಡೆಯೂ ನಾವು ಹೊಂದಾಣಿಕೆ ಮಾಡಿಕೊಂಡಿಲ್ಲ. ಸಮಯ, ಸಂದರ್ಭ ನೋಡಿ ರಾಜಕಾರಣದ ತಂತ್ರಗಾರಿಕೆ ಮಾಡಬೇಕು. ರಾಜಕೀಯ ಹೊಂದಾಣಿಕೆ ರಾಜಕಾರಣದಲ್ಲಿ ಇರಬಾರದು ಎಂದಿಲ್ಲ. ಅವಶ್ಯಕತೆ ಬರುವಾಗ ಮಾಡಬೇಕು’ ಎಂದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸದಾನಂದ ಗೌಡ, ‘ಅಧಿವೇಶನ ಆರಂಭವಾಗುವ ಮೊದಲೇ ಆಯ್ಕೆ ಮಾಡಬೇಕಿತ್ತು.
ಚುನಾವಣೆಯ ಸೋಲಿನ ಕಾರಣ ಮತ್ತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಾಗಿರುವುದರಿಂದ ತಡವಾಗಿದೆ. ಜುಲೈ 3ರೊಳಗೆ ಆಯ್ಕೆ ಮಾಡುತ್ತೇವೆ. ಸಿದ್ದರಾಮಯ್ಯ, ಡಿಕೆಶಿ ಜುಗಲ್ ಬಂದಿಗೆ ಸವಾಲ್ ಹಾಕುವ ನಾಯಕನನ್ನು ಆರಿಸುತ್ತೇವೆ’ ಎಂದರು. ‘ನಮ್ಮ ರಾಷ್ಟ್ರೀಯ ನಾಯಕರು ಅಳೆದು ತೂಗಿ ಆಯ್ಕೆ ಮಾಡ್ತಾರೆ. ನಮ್ಮ ಪಕ್ಷದಲ್ಲಿ ಶಿಸ್ತು ಇದೆ. ರಾಷ್ಟ್ರೀಯ ನಾಯಕರು ಆಯ್ಕೆ ಮಾಡ್ತಾರೆ’ ಎಂದು ಸದಾನಂದ ಗೌಡ ಹೇಳಿದರು.