ನ್ಯೂಸ್ ನಾಟೌಟ್ :ಇತ್ತೀಚೆಗಷ್ಟೇ ಮಂಗಳೂರಿನ ಉಳ್ಳಾಲದ ವ್ಯಕ್ತಿಗೆ ಬರೋಬ್ಬರಿ 7 ಲಕ್ಷ ಕರೆಂಟ್ ಬಿಲ್ ಬಂದಿರುವ ಬಗ್ಗೆ ವರದಿಯಾಗಿತ್ತು.ಇದೀಗ ಎರಡು ಬಲ್ಬ್ಗಳಿರುವ ತಗಡಿನ ಶೆಡ್ ನಲ್ಲಿ ವಾಸಿಸುತ್ತಿರುವ 90ರ ಅಜ್ಜಿಗೆ ಬರೋಬ್ಬರಿ 1 ಲಕ್ಷ ಬಿಲ್ ಬಂದಿರುವ ಘಟನೆ ಬಗ್ಗೆ ವರದಿಯಾಗಿದೆ.
ಹೌದು,ಅಜ್ಜಿ ಮನೆಗೆ ಜೆಸ್ಕಾಂ ಸಿಬ್ಬಂದಿ ಬಂದು 1 ಲಕ್ಷದ 3 ಸಾವಿರದ 315 ರೂ.ಬಿಲ್ ನೀಡಿದ್ದಾರೆ.ಈ ಬಿಲ್ ನೋಡಿ ಅಜ್ಜಿ ಶಾಕ್ ಆಗಿದ್ದು,ನನ್ನ ಮಗ ಈ ಮನೆ ಮಾರಿದರೂ ಅಷ್ಟು ಬಿಲ್ (Electricity Bill) ಕಟ್ಟಲು ಸಾಧ್ಯವಿಲ್ಲ ಎಂದು ಗೋಳಾಡಿದ್ದಾರೆ.ಈ ಘಟನೆ ಕೊಪ್ಪಳದಿಂದ ವರದಿಯಾಗಿದೆ.ಕೊಪ್ಪಳದ ಭಾಗ್ಯನಗರದಲ್ಲಿ ಸಣ್ಣ ತಗಡಿನ ಶೆಡ್ನಲ್ಲಿ ವಾಸವಾಗಿರುವ 90 ವಯಸ್ಸಿನ ಗಿರಿಜಮ್ಮ ಮನೆಯಲ್ಲಿ ಎರಡು ಬಲ್ಬ್ ಇವೆ. ಆದರೂ 6 ತಿಂಗಳಲ್ಲಿ ಬರೋಬ್ಬರಿ 1 ಲಕ್ಷ ರೂ. ಬಿಲ್ ಬಂದಿದೆ. ಈ ಅಜ್ಜಿ ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದರು. ಹೀಗಾಗಿ ಜೆಸ್ಕಾಂ, ಪ್ರತಿ 70 ರಿಂದ 80 ರೂ ಬಿಲ್ ನೀಡುತ್ತಿತ್ತು. ಆದ್ರೆ, ಆರು ತಿಂಗಳ ಹಿಂದೆ ವೃದ್ದೆಯ ಮನೆಗೆ ಜೆಸ್ಕಾಂ ಸಿಬ್ಬಂದಿ ಮೀಟರ್ ಅಳವಡಿಸಿದ್ದು, ಇದೀಗ 6 ತಿಂಗಳಲ್ಲಿ ಅಜ್ಜಿ ಮನೆಗೆ ಬರೋಬ್ಬರಿ 1,03,315 ರೂ. ವಿದ್ಯುತ್ ಬಿಲ್ ನೀಡಲಾಗಿದ್ದು, ಇದರಿಂದ ಅಜ್ಜಿ ಆತಂಕಕ್ಕೆ ಒಳಗಾಗಿದ್ದಾರೆ.
ಒಂದೊತ್ತಿನ ಊಟಕ್ಕೆ ಪರದಾಡುವ 90 ವರ್ಷದ ಅಜ್ಜಿ, ಇದೀಗ 1 ಲಕ್ಷ ರೂ. ವಿದ್ಯುತ್ ಬಿಲ್ ಹೇಗೆ ಕಟ್ಟುವುದು ಎಂದು ಕಣ್ಣೀರಿಟ್ಟಿದ್ದು,ಮೀಟರ್ ರೀಡರ್ ಎಡವಟ್ಟಿನಿಂದ ಈ ರೀತಿ ಆಗಿದ್ಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಈ ಬಗ್ಗೆ ಮಾತನಾಡಿರುವ ಇಂಧನ ಸಚಿವ ಕೆ.ಜೆ ಜಾರ್ಜ್ ಮೀಟರ್ ರೀಡರ್ ನಿಂದಾಗಿ ಈ ರೀತಿಯ ಸಮಸ್ಯೆಗಳಾಗಿರಬಹುದು.ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ.ಅದನ್ನು ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.