ನ್ಯೂಸ್ ನಾಟೌಟ್: ತಂದೆಯ ಆದರ್ಶಗಳನ್ನು ಜೀವನ ಮೌಲ್ಯಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಗಳು ತಂದೆಯ ದಾರಿಯಲ್ಲೇ ಸಾಗಿ ಸುದ್ದಿಯಾಗಿದ್ದಾಳೆ. ತಂದೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಆಗಿ ಕೆಲಸ ಮಾಡುತ್ತಿದ್ದ ಪೊಲೀಸ್ ಠಾಣೆಗೇ ಪಿಎಸ್ಐ ಆಗಿ ಬಂದು ತಂದೆಯಿಂದಲೇ ಅಧಿಕಾರ ಸ್ವೀಕರಿಸಿದ್ದಾಳೆ. ಈ ಅಪರೂಪದ ಘಟನೆ ಮಂಡ್ಯ ಜಿಲ್ಲೆಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿದ್ದ ವೆಂಕಟೇಶ್ ಅವರ ಜಾಗಕ್ಕೆ ಮಗಳು ಬಿ.ವಿ ವರ್ಷ ಪಿಎಸ್ಐ ಆಗಿ ನೇಮಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪುತ್ರಿ ತನ್ನ ತಂದೆಯಿಂದಲೇ ಬ್ಯಾಟನ್ ಪಡೆಯುವುದರ ಮೂಲಕ ಅಧಿಕಾರ ಸ್ವೀಕರಿಸಿದರು. ಬಳಿಕ ತಂದೆ ಹೂಗುಚ್ಛ ನೀಡಿ ಮಗಳಿಗೆ ಅಭಿನಂದಿಸಿದರು. ಇದರಿಂದ ವರ್ಷ ಫುಲ್ ಖುಷ್ ಆಗಿದ್ದಾರೆ. ವೆಂಕಟೇಶ್ ಅವರು ಕಳೆದ 16 ವರ್ಷ ಭಾರತೀಯ ಸೇನೆಗೆ ಸೇವೆ ಸಲ್ಲಿಸಿದ್ದರು. ಬಳಿಕ ಸೇನೆಯಿಂದ ನಿವೃತ್ತಿ ಪಡೆದ ಬಳಿಕ 2010ರಲ್ಲಿ ಪಿಎಸ್ಐ ಹುದ್ದೆಗೆ ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸೇನಾ ಕೋಟಾದಡಿ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದರು.
ಕಳೆದ ವರ್ಷದಿಂದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ಕಾರ್ಯ ನಿರ್ವಹಿಸುತ್ತಿದ್ದರು. ಮಗಳು ವರ್ಷ 2022 ರಲ್ಲಿ ಪಿಎಸ್ಐ ಪರೀಕ್ಷೆಯಲ್ಲಿ ಉತ್ತಿರ್ಣರಾಗಿದ್ದರು. ಹೀಗಾಗಿ ಕಳೆದ ಒಂದು ವರ್ಷದಿಂದ ಪ್ರೊಬೆಷನರಿ ಪಿಎಸ್ಐ ಆಗಿ ಕರ್ತವ್ಯಲ್ಲಿದ್ದರು. ಸದ್ಯ ತಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಮಗಳು ಹುದ್ದೆ ಸ್ವೀಕಾರ ಮಾಡಿದ್ದಾರೆ.