ನ್ಯೂಸ್ ನಾಟೌಟ್: ಪೊಲೀಸರು ರಸ್ತೆ ಸಂಚಾರಿ ನಿಯಮದ ಬಗ್ಗೆ ಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸಿದ್ದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಪೊಲೀಸ್ ಠಾಣೆಯಲ್ಲಿ ಪೊಲೀಸರೇ ವಿಚಿತ್ರ ರೀತಿಯಲ್ಲಿ ಬ್ಯಾನರ್ ಹಾಕಿ ಜನರಲ್ಲಿ ಜಾಗೃತಿ ಮೂಡಿಸುವ ಸಾಹಸವನ್ನು ಮಾಡಿ ಸುದ್ದಿಯಾಗಿದ್ದಾರೆ.
ಜೂನ್ 11ಕ್ಕೆ ಕದ್ರಿ ಪೊಲೀಸ್ ಠಾಣೆಯ ಆವರಣದಲ್ಲಿ ಅಪಘಾತಗೊಂಡ ಕಾರನ್ನು ನಿಲ್ಲಿಸಲಾಗಿದೆ. ಈ ಕಾರಿನ ಮುಂಭಾಗದಲ್ಲಿ ಬ್ಯಾನರ್ ಅಳವಡಿಸಲಾಗಿದ್ದು ವಿಮೆ ಮಾಡುವುದರ ಮಹತ್ವದವನ್ನು ಪೊಲೀಸರು ವಿವರಿಸಿದ್ದಾರೆ. ಹೊಸ ರೀತಿಯ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಬ್ಯಾನರ್ನಲ್ಲಿ ಕಾರು ತನ್ನ ಮಾಲೀಕನಿಗೆ ಹೇಳುವ ವಿವರಗಳು ಇಂತಿವೆ, ” ನನ್ನ ಮಾಲಿಕ ನನಗೆ ಇನ್ಸುರೆನ್ಸ್ ಮಾಡಿಸಿಲ್ಲ. ಜೂ.11ರಂದು ಯೆಯ್ಯಾಡಿಯಲ್ಲಿ ಮಾಲಿಕನು ನಿರ್ಲಕ್ಷ್ಯದಿಂದ ನನ್ನನ್ನು ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾನೆ. ವಿಮೆ ಇಲ್ಲದ ಕಾರಣ ನನ್ನನ್ನು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಇಡಲಾಗಿದೆ. ನಾನು ಅನಾಥನಾಗಿದ್ದೇನೆ. ನನ್ನ ಪರಿಸ್ಥಿತಿ ಯಾರಿಗೂ ಬೇಡ ಎನ್ನುವ ಬ್ಯಾನರ್ ಅಳವಡಿಸಲಾಗಿದೆ.
ಕೆಪಿಟಿಯಿಂದ ಯೆಯ್ಯಾಡಿ ಕಡೆಗೆ ಬರುತ್ತಿದ್ದ ನ್ಯಾನೋ ಕಾರು ಶಕ್ತಿನಗರದಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್ಗೆ ಗುದ್ದಿತ್ತು. ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದ. ಸಹ ಸವಾರ ಗಾಯಗೊಂಡಿದ್ದ. ಕಾರು ಮಾಲೀಕರು ಅಪಘಾತದ ದಿನದಂದು ಬೆಳಿಗ್ಗೆ ವಿಮೆಯನ್ನು ನವೀಕರಿಸಿದ್ದರು, ಆದರೆ ಪಾಲಿಸಿಯು 12 ಗಂಟೆಯ ನಂತರ ಮಾತ್ರ ಅನ್ವಯಿಸುತ್ತದೆ. ವಿಮೆಯನ್ನು ನವೀಕರಿಸದ ಕಾರಣ ನ್ಯಾನೋ ಕಾರಿನ ಮಾಲೀಕರಿಗೆ ಮೃತರಿಗೆ ವಿಮೆಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಮಾಲೀಕನನ್ನು ವಾಮಂಜೂರಿನ ವಿನೋದ್ ಎಂದು ಗುರುತಿಸಲಾಗಿದೆ.