ನ್ಯೂಸ್ ನಾಟೌಟ್: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆ ಅನುಷ್ಟಾನಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಅನ್ನದ ಬಟ್ಟಲು ಹಿಡಿದುಕೊಂಡು ಬಟ್ಟಲು ಬಡಿದು ಪ್ರತಿಭಟಿಸಿದರು.
ಬಡವರಿಗೆ ಉಚಿತ ಅಕ್ಕಿ ಕೊಡುವ ವ್ಯವಸ್ಥೆಯನ್ನು ಮೊದಲು ಜಾರಿಗೆ ತಂದಿದ್ದು ಸಿದ್ದರಾಮಯ್ಯ. ಹಿಂದೆ ಕಾಂಗ್ರೆಸ್ ಅಧಿಕಾರ ಪಡೆದಾಗ ಈ ಯೋಜನೆ ಪ್ರಥಮ ಬಾರಿಗೆ ಜಾರಿಗೊಂಡಿತು. ಈಗ ಮತ್ತೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ , ಅನ್ನಭಾಗ್ಯ ಯೋಜನೆ ಜಾರಿಗೊಳಿಸಲು ಹೊರಟಿದ್ದು, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಇದಕ್ಕೆ ಅಡ್ಡಿ ಮಾಡುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದರು. ಅಕ್ಕಿ ಕೊಡಲು ಒಪ್ಪಿಕೊಂಡಿದ್ದ ಭಾರತೀಯ ಆಹಾರ ನಿಗಮವು ಕೇಂದ್ರ ಸರ್ಕಾರದ ಒತ್ತಡದಿಂದ ಈಗ ಅಕ್ಕಿ ಕೊಡಲು ನಿರಾಕರಿಸುತ್ತಿದೆ. ಜನರ ಆಹಾರ ಭದ್ರತೆ ಕಸಿಯುವ ಕೆಲಸ ಕೇಂದ್ರ ಸರ್ಕಾರದಿಂದ ಆಗುತ್ತಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಆರೋಪಿಸಿದರು. ದುರ್ಬಲ ವರ್ಗದ ಪರವಾಗಿರುವ ಪಕ್ಷ ಕಾಂಗ್ರೆಸ್. ಶೋಭಕ್ಕ ಎಲ್ಲಿ ಹೋದ್ರಿ? ‘ಆಗ ಬಂಟ್ವಾಳದಲ್ಲಿ ಜೋಳಿಗೆ ಹಿಡಿದು ಅಕ್ಕಿ ಕೇಳಿದ್ರಲ್ಲ, ಈಗ ಎಲ್ಲಿ ಹೋದ್ರಿ’ ಎಂದು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಮಮತಾ ಗಟ್ಟಿ ಪ್ರಶ್ನಿಸಿದರು.