ನ್ಯೂಸ್ ನಾಟೌಟ್ : ಟೈಟಾನಿಕ್ ಅವಶೇಷಗಳನ್ನು ನೋಡಲು ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಸಣ್ಣ ಜಲಾಂತರ್ಗಾಮಿ ನೌಕೆ ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿರುವ ಬಗ್ಗೆ ಸೋಮವಾರ ವಾಷಿಂಗ್ಟನ್ ನಲ್ಲಿ ವರದಿಯಾಗಿದೆ.
ಅಮೆರಿಕದ ಕರಾವಳಿ ಕಾವಲು ಪಡೆ ಈ ಬಗ್ಗೆ ಮಾಹಿತಿ ನೀಡಿದೆ. ಈ ಜಲಾಂತರ್ಗಾಮಿ ಒಂದು ಬಾರಿ 5 ಜನರನ್ನು ಹೊತ್ತೊಯ್ಯಬಹುದು ಎನ್ನಲಾಗಿದ್ದು ಟೈಟಾನಿಕ್ ಹಡಗು ದುರಂತದ ಅವಶೇಷಗಳನ್ನು ವೀಕ್ಷಿಸುವ ಪೂರ್ಣ ಡೈವ್ ಸುಮಾರು 8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.
ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಓಷನ್ಗೇಟ್ ಎಕ್ಸ್ಪೆಡಿಶನ್ಸ್ ಕಂಪನಿಗೆ ಸೇರಿದ್ದು, ಅದರಲ್ಲಿ ಎಷ್ಟು ಜನರಿದ್ದರು ಎಂಬುದು ಇನ್ನು ಕೂಡಾ ಸ್ಪಷ್ಟವಾಗಿಲ್ಲ. ಸಿಬ್ಬಂದಿ ಸೇರಿ ಅದರಲ್ಲಿದ್ದ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ದೈತ್ಯ ಟೈಟಾನಿಕ್ ಹಡಗು 1912ರಲ್ಲಿ ತನ್ನ ಮೊದಲ ಪ್ರಯಾಣದಲ್ಲೇ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು.
ಈ ದುರಂತದಲ್ಲಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಹಡಗಿನ ಅವಶೇಷವನ್ನು 1985ರಲ್ಲಿ ಕಂಡುಹಿಡಿಯಲಾಯಿತು. ಅಟ್ಲಾಂಟಿಕ್ನ ಆಳದಲ್ಲಿರುವ ಈ ಅವಶೇಷವನ್ನು ಅಂದಿನಿಂದ ಇಂದಿನವರೆಗೂ ವ್ಯಾಪಕವಾಗಿ ಪರಿಶೋಧಿಸಲಾಗುತ್ತಿದೆ ಮತ್ತು ಪ್ರವಾಸಿ ಸಾಹಸಿಗಳನ್ನು ಜಲಾಂತರ್ಗಾಮಿ ಮೂಲಕ ಕರೆದೊಯ್ಯುದು ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.