ನ್ಯೂಸ್ ನಾಟೌಟ್: ಹಿಂದೂ ಯುವಕನಿಗೆ ನಾಯಿಯ ರೀತಿ ಬೊಗಳು ಎಂದು ಕೀಟಲೆ ಮಾಡಿ ಥಳಿಸಿದ ಮೂವರು ಮುಸ್ಲಿಂ ಯುವಕರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಮಧ್ಯ ಪ್ರದೇಶ ಪೊಲೀಸರು ನಿರ್ಧರಿಸಿದ್ದಾರೆ. ವಿಜಯ್ ರಾಮ್ಚಂದಾನಿ ಎಂಬ ಯುವಕನ ಮೇಲೆ ಹಲ್ಲೆ ನಡೆಸುವ ಮೂವರು ಮುಸ್ಲಿಂ ಯುವಕರು ಧಾರ್ಮಿಕ ಅವಹೇಳನ ಮಾಡುವ ಜೊತೆಯಲ್ಲೇ ನಾಯಿಯಂತೆ ಬೊಗಳು ಎಂದು ಕೀಟಲೆ ಮಾಡುತ್ತಾರೆ. ಈ ಎಲ್ಲಾ ಘಟನೆಗಳ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದು, ಮೂವರೂ ಆರೋಪಿಗಳ ಮನೆ ಮೇಲೆ ಬುಲ್ಡೋಜರ್ ಹತ್ತಿಸಲು ತೀರ್ಮಾನಿಸಿದ್ದಾರೆ.
ಆರೋಪಿಗಳು ಹಿಂದೂ ಯುವಕನಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗು ಎಂದು ಒತ್ತಾಯಿಸುವ ಸನ್ನಿವೇಶವೂ ವೈರಲ್ ವಿಡಿಯೋದಲ್ಲಿ ಚಿತ್ರೀಕರಣವಾಗಿದೆ. ಘಟನೆ ಸಂಬಂಧ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ನಿರ್ದೇಶನದಂತೆ ಭೋಪಾಲ್ ಪೊಲೀಸ್ ಆಯುಕ್ತರು ಹಾಗೂ ಭೋಪಾಲ್ ಜಿಲ್ಲಾಧಿಕಾರಿಗಳು ಜಂಟಿಯಾಗಿ ಕಾರ್ಯತಂತ್ರ ರೂಪಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಿ ಪಾಠ ಕಲಿಸಲು ಮುಂದಾಗಿದ್ದಾರೆ.
ವೈರಲ್ ವಿಡಿಯೋ ಸಂಬಂಧ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಕೂಡಾ ಸಮಗ್ರ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರಿಗೆ ಆದೇಶ ನೀಡಿದ್ದಾರೆ. ನಾಯಿಯ ಕುತ್ತಿಗೆಗೆ ಕಟ್ಟುವ ಬೆಲ್ಟ್ ಅನ್ನು ಹಿಂದೂ ಯುವಕನ ಕೊರಳಿಗೆ ಕಟ್ಟಿದ್ದ ಮೂವರು ಮುಸ್ಲಿಂ ಯುವಕರು ಆತನಿಗೆ ಥಳಿಸಿ ಕೀಟಲೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವ ಜೊತೆಯಲ್ಲೇ ಕಿಡ್ನಾಪ್ ಹಾಗೂ ಹಲ್ಲೆ ಪ್ರಕರಣವನ್ನೂ ದಾಖಲಿಸಲು ನಿರ್ಧರಿಸಲಾಗಿದೆ.
ಕೇವಲ 48 ಸೆಕೆಂಡ್ಗಳ ಈ ವಿಡಿಯೋ ಕ್ಲಿಪ್ನಲ್ಲಿ ಮೂವರು ಮುಸ್ಲಿಂ ಯುವಕರು ಹಿಂದೂ ಯುವಕನೊಬ್ಬನ ಕೊರಳಿಗೆ ನಾಯಿ ಬೆಲ್ಟ್ ಹಾಕಿ ಆತನಿಗೆ ನಾಯಿಯಂತೆ ಬೊಗಳು, ನಮ್ಮ ಕ್ಷಮೆ ಕೇಳು ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವ ಹಿಂದೂ ಯುವಕ, ನನ್ನ ಮೇಲೆ ಹಲ್ಲೆ ನಡೆಸಿದ್ದಷ್ಟೇ ಅಲ್ಲ, ಇಸ್ಲಾಂ ಧರ್ಮಕ್ಕೆ ಮತಾಂತರ ಆಗು, ಗೋಮಾಂಸ ಭಕ್ಷಣೆ ಮಾಡು ಎಂದೂ ಆರೋಪಿಗಳು ಒತ್ತಾಯಿಸಿದರು ಎಂದು ಹೇಳಿದ್ದಾನೆ. ಒಂದು ವೇಳೆ ನಾನು ಅವರು ಹೇಳಿದಂತೆ ಮಾಡದೇ ಹೋಗಿದ್ದರೆ ನನ್ನನ್ನು ಕೊಂದು ಹಾಕುತ್ತಿದ್ದರು ಎಂದು ಯುವಕ ಅಳಲು ತೋಡಿಕೊಂಡಿದ್ದಾನೆ.
ಆರೋಪಿಗಳ ವಿರುದ್ದ 24 ಗಂಟೆಗಳ ಒಳಗೆ ಕ್ರಮ ಕೈಗೊಳ್ಳಬೇಕು ಎಂದು ಮಧ್ಯ ಪ್ರದೇಶ ಗೃಹ ಸಚಿವರು ಹೇಳಿದ್ದೇ ತಡ, ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದಾರೆ. ಸಮೀರ್, ಸಾಜಿದ್ ಹಾಗೂ ಫೈಜಾನ್ ಇದೀಗ ಪೊಲೀಸ್ ವಶದಲ್ಲಿದ್ದು, ತೀವ್ರ ವಿಚಾರಣೆ ನಡೆಯುತ್ತಿದೆ.