ನ್ಯೂಸ್ ನಾಟೌಟ್: ಪಾನಮತ್ತ ಸಬ್ ಇನ್ಸ್ಪೆಕ್ಟರ್ ಖರೀದಿಸಿದ ಸ್ವೀಟ್ಸ್ ನ ಹಣ ಕೊಡುವಂತೆ ಕೇಳಿದ ಮಾಲೀಕನಿಗೆ ಅವಾಚ್ಯವಾಗಿ ನಿಂದಿಸಿ ಬೈದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜೂನ್ 18ರಂದು ವೈರಲ್ ಆಗಿದೆ.
ನೀವು ಆರ್ಡರ್ ಮಾಡಿದ ಸ್ವೀಟ್ಸ್ಗೆ ಹಣ ಪಾವತಿಸಿ ಎಂದು ಅಂಗಡಿ ಮಾಲೀಕ ಸಬ್ ಇನ್ಸ್ಪೆಕ್ಟರ್ಗೆ ಹೇಳಿದ ಕೂಡಲೇ ತಾಳ್ಮೆ ಕಳೆದುಕೊಂಡ ಇನ್ಸ್ಪೆಕ್ಟರ್ ಮಾಲೀಕನತ್ತ ಮುನ್ನುಗ್ಗಿ ಬಂದು ಎದೆಗೆ ಎದೆ ಕೊಟ್ಟು ದೂಡಿದ್ದಾನೆ. ಆಗ ಅಂಗಡಿ ಮಾಲೀಕ ಇನ್ಸ್ಪೆಕ್ಟರ್ನನ್ನು ಪಕ್ಕಕ್ಕೆ ತಳ್ಳಿ, ಹಣ ಕೊಟ್ಟು ಸ್ವೀಟ್ಸ್ ತೆಗೆದುಕೊಂಡು ಹೋಗಲು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಉತ್ತರಪ್ರದೇಶದ ಕಾನ್ಪುರ್ ನಗರದ ಸ್ವೀಟ್ಸ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ.
ನಂತರ ಇನ್ಸ್ಪೆಕ್ಟರ್ ತನ್ನ ಮೊಬೈಲ್ ತೆಗೆದುಕೊಂಡು, ಸರ್ ನಾನಿಲ್ಲಿ ಸ್ವೀಟ್ಸ್ ಶಾಪ್ ನಲ್ಲಿದ್ದೇನೆ. ನೀವು ಶಾಪ್ಗೆ ಬನ್ನಿ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಜಟಾಪಟಿಯ ನಂತರ ಇನ್ಸ್ಪೆಕ್ಟರ್ ಅಂಗಡಿ ಮಾಲೀಕನ ಬಳಿ ಎಷ್ಟು ಹಣ ಕೊಡಬೇಕೆಂದು ಕೇಳಿದ್ದ. ಅದಕ್ಕೆ ಮಾಲೀಕ 110 ರೂಪಾಯಿ ಎಂದು ಉತ್ತರಿಸಿದ್ದ. ಪಾನಮತ್ತ ಇನ್ಸ್ಪೆಕ್ಟರ್ ಯುಪಿಐ ಮೂಲಕ ಹಣ ಪಾವತಿಸಲು ಪ್ರಯತ್ನಿಸಿದ್ದ. ಆಗ ಅಂಗಡಿ ಮಾಲೀಕ ಕುಡಿದ ಮತ್ತಿನಲ್ಲಿ ಇನ್ಸ್ಪೆಕ್ಟರ್ಗೆ ಕ್ಯೂಆರ್ ಕೋಡ್ ಕೂಡಾ ಸ್ಕ್ಯಾನ್ ಮಾಡಲು ಆಗುತ್ತಿಲ್ಲ ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ವೀಟರ್ ಬಳಕೆದಾರರು ವಿಡಿಯೋವನ್ನು ಉತ್ತರಪ್ರದೇಶದ ಕಾನ್ಪುರ್ ಪೊಲೀಸರ ಟ್ವೀಟರ್ ಹ್ಯಾಂಡಲ್ಗೆ ಟ್ಯಾಗ್ ಮಾಡಿ, ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಇನ್ಸ್ಪೆಕ್ಟರ್ನನ್ನು ಅಮಾನತುಗೊಳಿಸಲಾಗಿದೆ ಎಂದು ಕಾನ್ಪುರ್ ಪೊಲೀಸರು ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವರದಿ.