ನ್ಯೂಸ್ ನಾಟೌಟ್ : ಕಾಂತಾರ ಸಿನಿಮಾ ಖ್ಯಾತಿಯ ನಿರ್ದೇಶಕ ನಟ ರಿಷಬ್ ಶೆಟ್ಟಿ ನಿರ್ದೇಶನದ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ಭಾರಿ ಜನ ಮೆಚ್ಚುಗೆ ಗಳಿಸಿತ್ತು. ಈ ಸಿನಿಮಾ ಕೇರಳದ ಗಡಿ ಭಾಗದಲ್ಲಿರುವ ಕಾಸರಗೋಡಿನ ಕನ್ನಡಿಗ ವಿದ್ಯಾರ್ಥಿಗಳ ಹಲವಾರು ಸಂಕಷ್ಟವನ್ನು ತೆರೆದಿಟ್ಟಿತ್ತು. ಇದೀಗ ಅದೇ ಸಿನಿಮಾದಲ್ಲಿ ಬರುವ ದೃಶ್ಯವೊಂದರ ರೀತಿಯಲ್ಲೇ ಟೀಚರ್ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸಿ ಸುದ್ದಿಯಾಗಿದ್ದಾರೆ. ಕನ್ನಡವನ್ನು ಉಳಿಸಿ ಅನ್ನುವ ವಿದ್ಯಾರ್ಥಿಗಳ ಕೂಗು ಇದೀಗ ಕೇರಳ ಸರ್ಕಾರದವರೆಗೂ ತಲುಪಿದೆ ಅನ್ನುವ ಮಾಹಿತಿಗಳು ಲಭ್ಯವಾಗಿದೆ.
ಕೇರಳ ಸರ್ಕಾರದ ಅಧೀನದಲ್ಲಿರುವ ಕಾಸರಗೋಡು ಜಿಲ್ಲೆ ಕರ್ನಾಟಕಕ್ಕೆ ಹೊಂದಿಕೊಂಡಿದೆ. ಕೇರಳಕ್ಕೆ ಸೇರಿದ ಜಾಗವಾದರೂ ಗಡಿ ಭಾಗ ಕಾಸರಗೋಡಿನಲ್ಲಿ ಕನ್ನಡಿಗರೇ ಹೆಚ್ಚಾಗಿದ್ದಾರೆ. ತುಳು, ಕನ್ನಡ ಭಾಷೆಯನ್ನು ಮಾತನಾಡುವ ಜನರನ್ನು ಇಲ್ಲಿ ಹೆಚ್ಚಾಗಿ ಕಾಣಬಹುದು. ಕಾಸರಗೋಡು ಜಿಲ್ಲೆಯ ಅಡೂರು ಎಂಬಲ್ಲಿನ ಶಾಲೆಯೊಂದರಲ್ಲಿ ಕನ್ನಡಿಗ ವಿದ್ಯಾರ್ಥಿಗಳೇ ಬಹುಪಾಲಿದ್ದಾರೆ. ಕಾಸರಗೋಡು ಡಿಸ್ಟ್ರಿಕ್ಟ್ ಪಂಚಾಯತ್ ವ್ಯಾಪ್ತಿಯ ಅಡೂರಿನ ಈ ಜಿಹೆಚ್ಎಸ್ಎಸ್ ಶಾಲೆಯಲ್ಲಿ ಕನ್ನಡ ಪಾಠ ಮಾಡುವುದಕ್ಕೆ ಮಲೆಯಾಳಂ ಭಾಷೆಯ ಟೀಚರ್ ಅನ್ನು ನೇಮಕ ಮಾಡಲಾಗಿದೆ. ಈ ಟೀಚರ್ ಪಾಠ ಸರಿಯಾಗಿ ಮಾಡುತ್ತಿಲ್ಲ. ಇವರಿಗೆ ಕನ್ನಡವೇ ಬರುವುದಿಲ್ಲ ಎಂದು ಇದೀಗ ಮಕ್ಕಳು ಸಿಟ್ಟಿಗೆದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ. ಇವರಿಗೆ ಸ್ಥಳೀಯ ಕನ್ನಡ ಪ್ರೇಮಿಗಳು ಕೂಡ ಸಾಥ್ ನೀಡಿದ್ದಾರೆ. ಸದ್ಯ ಮಕ್ಕಳು ತರಗತಿಗೆ ಹೋಗದೆ ಶಾಲೆಯ ಎದುರು ನಿಂತು ಕನ್ನಡ ಉಳಿಸಿ ಅನ್ನುವ ಘೋಷಣೆ ಕೂಗುತ್ತಿದ್ದಾರೆ.
ನಟ ರಿಷಬ್ ಶೆಟ್ಟಿ ನಿರ್ದೇಶನದ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಕೇರಳದ ಗಡಿ ಭಾಗದಲ್ಲಿರುವ ಕಾಸರಗೋಡಿನ ಕನ್ನಡಿಗ ವಿದ್ಯಾರ್ಥಿಗಳ ಸಮಸ್ಯೆಯನ್ನು ತೆರೆಡಿಡಲಾಗಿತ್ತು. ಈ ಸಿನಿಮಾವು ವಸ್ತುಸ್ಥಿತಿಯನ್ನು ತೆರೆದಿಟ್ಟಿತ್ತು. ಕೇರಳ ಸರ್ಕಾರ ಕನ್ನಡದ ಬಗ್ಗೆ ತಾತ್ಸಾರ ಮನೋಭಾವನೆಯನ್ನು ಹೊಂದಿರುವ ಕಥಾ ಹಂದರವನ್ನು ಸುಂದರವಾಗಿ ಹೆಣೆಯಲಾಗಿದೆ. ಇದೀಗ ಅಂತಹುದೇ ಸಮಸ್ಯೆಯ ವಿರುದ್ಧ ವಿದ್ಯಾರ್ಥಿಗಳು ಸ್ಫೋಟಿಸಿರುವ ವಿಚಾರ ಈಗ ಎಲ್ಲೆಡೆ ಸುದ್ದಿಯಾಗಿದೆ.