ನ್ಯೂಸ್ ನಾಟೌಟ್ : ಬಾವಿರಿಂಗ್ ನಿರ್ಮಾಣ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಚಳಿಜ್ವರದಿಂದ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಜೂ.16ರಂದು ಉಪ್ಪಿನಂಗಡಿಯಲ್ಲಿ ನಡೆದಿದೆ.ಕೇರಳ ಕೊಲ್ಲಂ ನಿವಾಸಿ ರಾಜನ್(61ವ.)ಮೃತ ವ್ಯಕ್ತಿ.
ರಾಜನ್ ಅವರು ಉಪ್ಪಿನಂಗಡಿಯಲ್ಲಿ ಬಾವಿ ರಿಂಗ್ ನಿರ್ಮಾಣ ಕೆಲಸ ಮಾಡುತ್ತಿದ್ದ ಕಾಂಟ್ರಾಕ್ಟರ್ ಆಗಿರುವ ಕೊಲ್ಲಂನ ಬಾಬು ಎಂಬವರ ಜೊತೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಅವರಿಗೆ ಚಳಿಜ್ವರ ಕಾಣಿಸಿಕೊಂಡಿದ್ದು ನಟ್ಟಿಬೈಲ್ನಲ್ಲಿರುವ ರೂಮ್ನಲ್ಲಿ ವಿಶ್ರಾಂತಿಯಲ್ಲಿದ್ದರು. ಜೂ.16ರಂದು ಬೆಳಿಗ್ಗೆ ಅಸ್ವಸ್ಥಗೊಂಡ ರಾಜನ್ರನ್ನು ಅವರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರು ಚಿಕಿತ್ಸೆಗೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದು ಪರೀಕ್ಷಿಸಿ ಔಷಧಿಯನ್ನು ಪಡೆದುಕೊಂಡು ರೂಮಿಗೆ ಹೋಗಿದ್ದರು.
ಆದರೆ ಮಧ್ಯಾಹ್ನ ವೇಳೆಗೆ ಅವರಿಗೆ ಚಳಿಜ್ವರ ಜೋರಾಗಿದೆ. ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಮತ್ತೆ ಮಧ್ಯಾಹ್ನ 1 ಗಂಟೆ ವೇಳೆಗೆ ಕರೆದುಕೊಂಡು ಬಂದಿದ್ದು ವೈದ್ಯರು ಪರೀಕ್ಷಿಸುವ ವೇಳೆ ರಾಜನ್ರವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಈ ಬಗ್ಗೆ ಪಿಕಪ್ ಚಾಲಕ ಶಿವಾನಂದ ಹರಿನಗರ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.