ನ್ಯೂಸ್ ನಾಟೌಟ್: ವಿವಾದಿತ ಸ್ಥಳ ಸುಳ್ಯದ ಮೇನಾಲದಲ್ಲಿ ಹಿಂದೂ-ಮುಸ್ಲಿಂ ಧಾರ್ಮಿಕ ಕಾರ್ಯಾಚರಣೆ ಮಾಡಬಾರದು ಎಂದು ತೀರ್ಮಾನವಾಗಿತ್ತು. ಈಗ ವಿವಾದಿತ ಜಾಗದಲ್ಲಿ ಮುಸ್ಲಿಂಮರಿಗೆ ಉರೂಸ್ ಮಾಡುವುದಕ್ಕೆ ಅನುಮತಿ ನೀಡಿ ಹಿಂದೂ-ಮುಸ್ಲಿಂಮರ ನಡುವೆ ಕೋಮು ಗಲಭೆ ಎಬ್ಬಿಸಲು ಕಾಂಗ್ರೆಸ್ ಸರಕಾರ ಯತ್ನಿಸುತ್ತಿದೆ ಎಂದು ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಹರೀಶ್ ಕಂಜಿಪಿಲಿಯವರು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇಂತಹ ಯತ್ನಗಳು ಅಧಿಕವಾಗಿ ಕೋಮು ಗಲಭೆ ಸೃಷ್ಟಿಯಾಗಿ ಅನಾಹುತಗಳು ಸಂಭವಿಸಿದರೆ ಅದಕ್ಕೆ ಕಾಂಗ್ರೆಸ್ ಸರಕಾರವೇ ಹೊಣೆಯಾಗುತ್ತದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಜನರಿಗೆ ಅನ್ಯಾಯ ಮಾಡುತ್ತಿದೆ. ಬಿಜೆಪಿ ಸರ್ಕಾರ ಆಡಳಿತದಲ್ಲಿ ಮೂರು ಮಹತ್ವಪೂರ್ಣ ನಿರ್ಧಾರಗಳಾದ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯಿದೆ, ಎಪಿಎಂಸಿಗೆ ತಿದ್ದುಪಡಿ ಕಾಯ್ದೆ ತಂದು ರೈತರಿಗೆ ಸಹಾಯಕವಾಗುವಂತಹ ಕೆಲಸ ಮಾಡಿತ್ತು.
ಆದರೆ ಕಾಂಗ್ರೆಸ್ ಬಂದ ನಂತರ ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಕಂಜಿಪಿಲಿ ಕಿಡಿಕಾರಿದರು.ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ , ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಸುಳ್ಯ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ , ಜಿಲ್ಲಾ ರೈತಮೋರ್ಚಾದ ಉಪಾಧ್ಯಕ್ಷ ಮಹೇಶ್ ರೈ , ಸುಳ್ಯ ಮಂಡಲ ಯುವ ಮೋರ್ಚಾ ಕಾರ್ಯದರ್ಶಿ ಸುನಿಲ್ ಉಪಸ್ಥಿತರಿದ್ದರು.