ನ್ಯೂಸ್ ನಾಟೌಟ್: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಅಭಿನಂದಿಸಿ ಹಾಕಿದ್ದ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಶುಕ್ರವಾರ ತಡರಾತ್ರಿ ಇಂತಹದ್ದೊಂದು ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ.
ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಉಳ್ಳಾಲದ ಅಬ್ಬಕ್ಕ ವೃತ್ತದವರೆಗಿನ ರಾಜ ರಸ್ತೆಯ ವಿಭಜಕ ಮತ್ತು ಇಕ್ಕೆಲಗಳಲ್ಲಿ ಯು.ಟಿ ಖಾದರ್ ಅವರಿಗೆ ಅಭಿನಂದಿಸಿ ಫ್ಲೆಕ್ಸ್ ಗಳನ್ನ ಹಾಕಲಾಗಿತ್ತು. ಕಳೆದ ಭಾನುವಾರದಂದು ಉಳ್ಳಾಲದ ಮಹಾತ್ಮಗಾಂಧಿ ರಂಗ ಮಂದಿರದಲ್ಲಿ ಶಾಸಕರಿಗೆ ನಡೆದ ಸನ್ಮಾನಕ್ಕೂ ಶುಭ ಕೋರಿ ಫ್ಲೆಕ್ಸ್ ಗಳನ್ನ ಹಾಕಲಾಗಿತ್ತು.
ಶುಕ್ರವಾರ ರಾತ್ರಿ ಕಿಡಿಗೇಡಿಗಳು ಐದಾರು ಫ್ಲೆಕ್ಸ್ ಗಳನ್ನ ಹರಿದು ಹಾಕಿ ವಿಕೃತಿ ಮೆರೆದಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯ ಕೂಗಳತೆಯ ಅಂತರದಲ್ಲಿ ಹಾಕಲಾಗಿದ್ದ ಫ್ಲೆಕ್ಸನ್ನೂ ಹರಿದು ಹಾಕಿದ್ದಾರೆ. ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. ತಡರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಕೃತ್ಯ ಎಸಗಿರುವುದಾಗಿ ಮಾಹಿತಿ ಲಭಿಸಿದೆ. ಫ್ಲೆಕ್ಸ್ ಗಳನ್ನ ಸ್ಥಳೀಯ ನಗರಾಡಳಿತದಿಂದ ಅನುಮತಿ ಪಡೆಯದೆ ಅಳವಡಿಸಿರುವುದರಿಂದ ಈವರೆಗೂ ಯಾರೂ ಠಾಣೆಗೆ ದೂರು ನೀಡಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.