ನ್ಯೂಸ್ ನಾಟೌಟ್: ಸೌಜನ್ಯ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಇಷ್ಟು ದಿನ ಹಂತಕ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದ್ದ ಸಂತೋಷ್ ರಾವ್ ಅಪರಾಧಿ ಅಲ್ಲ ಎಂದು ಶುಕ್ರವಾರ ಸಿಬಿಐ ವಿಶೇಷ ಕೋರ್ಟ್ ಆದೇಶ ನೀಡಿದೆ. ಈ ಆದೇಶದ ಬೆನ್ನಲ್ಲೇ ಹಲವು ಅನುಮಾನಗಳು ಹುಟ್ಟಿಕೊಂಡಿದೆ. ಈ ಬಗೆಗಿನ ವರದಿ ಇಲ್ಲಿದೆ ನೋಡಿ.
ಪ್ರಕರಣಕ್ಕೆ ರೋಚಕ ಟ್ವಿಸ್ಟ್..!
ಸೌಜನ್ಯ ಹತ್ಯೆ ಪ್ರಕರಣ ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿ ಬೀಳಿಸಿತ್ತು. ಅಷ್ಟೇ ಅಲ್ಲ ರಾಜ್ಯ, ದೇಶದಾದ್ಯಂತ ವಿವಿಧ ಮಾಧ್ಯಮಗಳು ಸೌಜನ್ಯ ಹತ್ಯೆ ಪ್ರಕರಣವನ್ನು ವರದಿ ಮಾಡಿದ್ದವು. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಧರ್ಮಸ್ಥಳದ ಸಮೀಪ ಮಣ್ಣ ಸಂಖ ಎಂಬಲ್ಲಿ 2012 ಅಕ್ಟೋಬರ್ 10ರಂದು ರಾತ್ರಿ ಸೌಜನ್ಯಳ ಮೃತ ದೇಹ ಪತ್ತೆಯಾಗಿತ್ತು. ಭೀಕರವಾಗಿ ಅತ್ಯಾಚಾರ ಎಸಗಿ ಆಕೆಯನ್ನು ಹತ್ಯೆ ಮಾಡಲಾಗಿತ್ತು. ಇಡೀ ಪ್ರಕರಣ ಭಾರಿ ದೊಡ್ಡ ಸುದ್ದಿಯಾಗಿತ್ತು. ಈ ಕೊಲೆಯ ಹಿಂದೆ ಪ್ರಭಾವಿಗಳ ಕೈವಾಡವಿದೆ ಅನ್ನುವ ಆರೋಪಗಳು ಕೇಳಿ ಬಂದಿದ್ದವು. ಪೊಲೀಸರು ರೇಪ್ ಅಂಡ್ ಮರ್ಡರ್ ಕೇಸ್ ದಾಖಲಿಸಿದ್ರು. ಇದಾದ ಮರುದಿನ ಅಂದ್ರೆ11-10-2012 ರಂದು ಕಾರ್ಕಳ ಮೂಲದ ಕಾರ್ಮಿಕ ಸಂತೋಷ್ ರಾವ್ (38) ಎಂಬಾತನನ್ನು ಬಂಧಿಸಲಾಗಿತ್ತು. ತೀವ್ರ ವಿಚಾರಣೆ ನಡೆಸಿದ ಬಳಿಕ ಈತನೇ ಅಪರಾಧಿ ಎಂದು ತೀರ್ಮಾನಕ್ಕೆ ಬರಲಾಗಿತ್ತು. ಈತನನ್ನು ಧರ್ಮಸ್ಥಳದ ಬಾಹುಬಲಿ ಬೆಟ್ಟದಿಂದ ಬಂಧಿಸಲಾಗಿತ್ತು. ಆದರೆ ಸಂತೋಷ್ ರಾವ್ ಬಂಧನದ ಬಳಿಕ ಭಾರೀ ಪ್ರತಿಭಟನೆ ನಡೆದಿತ್ತು. ಸೌಜನ್ಯ ಪೋಷಕರಿಗೆ ಹಿಂದೂ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲವಾಗಿ ನಿಂತಿದ್ದರು. ನೈಜ ಆರೋಪಿಗಳನ್ನು ತಿರುಗಲು ಬಿಟ್ಟು ನಿರಪರಾಧಿಯನ್ನು ಬಂಧಿಸಲಾಗಿದೆ ಎಂದು ತಿಮರೋಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಆ ಬಳಿಕ ಪ್ರಕರಣವನ್ನು ಸಿಐಡಿಯಿಂದ ಸಿಬಿಐಗೆ ವಹಿಸಲಾಗಿತ್ತು. ಇದೀಗ ಹನ್ನೊಂದು ವರ್ಷದ ಬಳಿಕ ಸಂತೋಷ್ ರಾವ್ ನಿರಪರಾಧಿ ಎಂದು ತೀರ್ಪು ಪ್ರಕಟಿಸಲಾಗಿದೆ.
ಏನಂದ್ರು ಮಹೇಶ್ ಶೆಟ್ಟಿ ತಿಮರೋಡಿ..?
ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ನಿರಪರಾಧಿಯಾಗಿದ್ದ ಸಂತೋಷ್ ರಾವ್ನನ್ನು ಅಪರಾಧಿಯಂತೆ ಬಿಂಬಿಸಲಾಗಿತ್ತು. ಆದರೆ ಸಿಬಿಐ ಕೋರ್ಟ್ ಆತನನ್ನು ದೋಷಮುಕ್ತಿಗೊಳಿಸಿದೆ ಎನ್ನುವ ಮಾಹಿತಿ ಲಭಿಸಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಗೆಲುವು ಎಂದು ಹಿಂದೂ ಪರ ನಾಯಕ, ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ತಿಳಿಸಿದ್ದಾರೆ. ನ್ಯೂಸ್ ನಾಟೌಟ್ ಜತೆಗೆ ಮಾತನಾಡಿದ ಅವರು, ‘ಸಂತೋಷ್ ರಾವ್ ನಿರಪರಾಧಿ ಎಂದು ನಾವೇ ಸ್ವಂತ ಖರ್ಚಿನಲ್ಲಿ ವಕೀಲರ ನೇಮಿಸಿ ನ್ಯಾಯಾಲಯದಲ್ಲಿ ಹೋರಾಟ ಮಾಡಿದ್ದೇವೆ. ಇದು ನಿರೀಕ್ಷಿತ ಗೆಲುವು. ಆದರೆ ಸೌಜನ್ಯಳನ್ನು ಕ್ರೂರವಾಗಿ ಅತ್ಯಾಚಾರವೆಸಗಿ ಕೊಂದ ನೈಜ ಅಪರಾಧಿಗೆ ತಕ್ಕ ಶಿಕ್ಷೆಯಾಗಬೇಕಿದೆ. ಇದಕ್ಕಾಗಿ ಹನ್ನೊಂದು ವರ್ಷ ನಾವು ಕಾನೂನು ಹೋರಾಟ ನಡೆಸಿದ್ದೇವೆ. ತಪ್ಪಿತಸ್ಥರಿಗೆ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿ ಕೋರ್ಟ್ನಿಂದ ಮಾತ್ರ ಶಿಕ್ಷೆಯಾಗಲು ಸಾಧ್ಯ ಎಂಬುವುದನ್ನು ನಾವು ನಂಬಿದ್ದೇವೆ. ಈ ಪ್ರಕರಣದ ಹಿಂದಿರುವ ನೈಜ ಅಪರಾಧಿಗಳಿಗೆ ಅಣ್ಣಪ್ಪ ಸ್ವಾಮಿ ಸರಿಯಾದ ಶಿಕ್ಷೆ ನೀಡುತ್ತಾನೆ’ ಎಂದು ತಿಳಿಸಿದರು.